ಅಂಕಿ-ಸಂಖ್ಯೆಗಳ ಮೇಲೆ ಅಪಾರ ಆಸಕ್ತಿ ಇರುವ ಮಂದಿಯ ಫೇವರಿಟ್ ಸುಡೊಕು ಆಟದ ಪಿತಾಮಹ ಎಂದೇ ಕರೆಯಲಾದ ಜಪಾನೀ ಪ್ರಕಾಶಕ ಮಾಕಿ ಕಜಿ ನಿಧನರಾಗಿದ್ದಾರೆ.
ಸುದೀರ್ಘಾವಧಿಯಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ 69ರ ಹರೆಯದ ಕಜಿ ಅಗಸ್ಟ್ 10ರಂದು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಜಿ ಸ್ಮರಣಾರ್ಥ ಸೇವೆಯೊಂದನ್ನು ಮುಂದೊಂದು ದಿನ ಹಮ್ಮಿಕೊಳ್ಳಲಾಗುವುದು.
18ನೇ ಶತಮಾನದಲ್ಲಿ ಸ್ವಿಸ್ ಗಣಿತಜ್ಞ ಲಿಯೋನಾರ್ಡ್ ಯೂಲರ್ ಆವಿಷ್ಕರಿಸಿದ ಸುಡೊಕು ಎಂಬ ಸಂಖ್ಯಾ-ಒಗಟು ಸರಣಿಯ ಆಧುನಿಕ ಅವತರಣಿಕೆಯನ್ನು ಅಮೆರಿಕದಲ್ಲಿ ಅಭಿವೃದ್ಧಿ ಪಡಿಸಲಾಯಿತು ಎನ್ನಲಾಗುತ್ತದೆ.
ಈ ಸರಣಿಗೆ ’ಸುಡೊಕು’ ಎಂಬ ಹೆಸರಿಟ್ಟ ಕಜಿ, ಈ ಸಂಖ್ಯಾ-ಒಗಟಿನ ಪರಿಕಲ್ಪನೆಯನ್ನು ವ್ಯಾಪಕಗೊಳಿಸಿದ ಶ್ರೇಯ ಹೊಂದಿದ್ದಾರೆ. ’ಪ್ರತಿ ಅಂಕಿಯೂ ಒಂದೇ ಆಗಿರಬೇಕು’ ಎಂಬ ಅರ್ಥದ ಸುಡೊಕು ಆಟದಲ್ಲಿ, ಆಟಗಾರನು 81 ಚೌಕಗಳ ಬಾಕ್ಸ್‌ನಲ್ಲಿ 1-9ರ ವರೆಗಿನ ಅಂಕಿಗಳನ್ನು ಯಾವುದೇ ಒಂದು ಸಾಲಿನಲ್ಲಿ ಪುನರಾವರ್ತನೆಗೊಳ್ಳದಂತೆ ಭರ್ತಿ ಮಾಡಬೇಕು.
ಅಮೆರಿಕದ ವೃತ್ತಪತ್ರಿಕೆಯೊಂದರಲ್ಲಿ ಈ ಅಂಕಿ ಆಟವನ್ನು ನೋಡಿದ ಕಜಿ, 1980ರ ದಶಕದಲ್ಲಿ ಅದನ್ನು ಜಪಾನ್‌ಗೆ ತಂದು ’ಸುಡೊಕು’ಗೆ ಜನ್ಮವಿತ್ತಿದ್ದಾರೆ. ನಂತರದ ದಶಕಗಳಲ್ಲಿ ಸುಡೊಕು ಯೂರೋಪ್ ಹಾಗೂ ಅಮೆರಿಗಳಲ್ಲಿ ಪ್ರಖ್ಯಾತಿಯ ಉತ್ತುಂಗಕ್ಕೇರಿದ್ದು, ಇಂದಿಗೂ ಸಹ ಪ್ರತಿಷ್ಠಿತ ದೈನಿಕಗಳು ಪ್ರತಿನಿತ್ಯದ ತಮ್ಮ ಪತ್ರಿಕೆಗಳಲ್ಲಿ ವಿಭಾಗವೊಂದನ್ನು ಸುಡೊಕುಗೆಂದೇ ಮೀಸಲಿಟ್ಟಿವೆ.
“ಹೊಸ ಒಗಟನ್ನು ರಚಿಸುವುದು ನಿಧಿ ಪತ್ತೆ ಮಾಡಿದಷ್ಟು ಆನಂದ ಕೊಡುತ್ತದೆ. ಇದರಿಂದ ದುಡ್ಡು ಸಿಗುತ್ತೋ ಇಲ್ಲವೋ ಎಂದಲ್ಲ. ಅದನ್ನು ಬಿಡಿಸಲು ಯತ್ನಿಸುವಾಗ ಸಿಗುವ ಖುಷಿ ದೊಡ್ಡದು,” ಎಂದು ಬಿಬಿಸಿಗೆ 2007ರಲ್ಲಿ ಕೊಟ್ಟ ಸಂದರ್ಶನವೊಂದರ ವೇಳೆ ಕಜಿ ತಿಳಿಸಿದ್ದರು.