ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ.
107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ ಪಶ್ಚಿಮದಲ್ಲಿರುವ ಶೊಡೋಶಿಮಾ ದ್ವೀಪದಲ್ಲಿ ನವೆಂಬರ್ 5, 1913ರಲ್ಲಿ ಜನಿಸಿದ್ದಾರೆ. 11 ಮಂದಿ ಒಡಹುಟ್ಟಿದವರಲ್ಲಿ ಈ ಸಹೋದರಿಯರು 3ನೇ ಮತ್ತು 4ನೇ ಯವರಾಗಿದ್ದಾರೆ.
ಸುಮಿಯಾಮಾ ಶೊಡೋಶಿಮಾ ದ್ವೀಪದಲ್ಲೇ ಉಳಿದುಕೊಂಡು ತಮ್ಮದೇ ಕುಟುಂಬ ಹೊಂದಿದರೆ ಕೊಡಾಮಾರನ್ನು ಶಾಲಾ ದಿನಗಳಲ್ಲೇ ಕೆಲಸಗಾರ್ತಿಯಾಗಿರಲು ಜಪಾನ್‌ನ ದಕ್ಷಿಣದಲ್ಲಿರುವ ಕ್ಯೂಶೂಗೆ ಕಳುಹಿಸಿದ ಪರಿಣಾಮ ಇಬ್ಬರೂ ಚಿಕ್ಕ ವಯಸ್ಸಿನಲ್ಲೇ ದೂರವಾದರು.
ತಮ್ಮ 70ನೇ ವಯಸ್ಸಿನವರೆಗೂ ಬೇರೆ ಬೇರೆ ಕಡೆಗಳಲ್ಲಿದ್ದುಕೊಂಡು ದೂರವೇ ಉಳಿದಿದ್ದ ಅವಳಿಗಳು ಬಳಿಕ ಮತ್ತೆ ಒಂದಾಗಿ ಶಿಕೋಕುವಿನ 88 ದೇಗುಲಗಳನ್ನು ಭೇಟಿ ಕೊಟ್ಟು ಬಂದಿದ್ದಾರೆ.
ಸೆಪ್ಟೆಂಬರ್ 1ರಂದು 107 ವರ್ಷ 300 ದಿನಗಳನ್ನು ಪೂರೈಸಿರುವ ಸುಮಿಯಾಮಾ ಹಾಗೂ ಕೊಡಾಮಾ, 107 ವರ್ಷ 175 ದಿನಗಳ ಕಾಲ ಬದುಕಿ ದಾಖಲೆ ನಿರ್ಮಿಸಿದ್ದ ಜಪಾನ್‌ನ ಮತ್ತೊಬ್ಬರು ಅವಳಿಗಳಾದ ಕಿನ್ ನಾರಿಟಾ ಹಾಗೂ ಕಿನ್ ಕೇನೀರ ದಾಖಲೆ ಮುರಿದಿದ್ದಾರೆ.