ಪ್ರತಿ ವರ್ಷ ವಿಶ್ವದಾದ್ಯಂತ ರಸ್ತೆ ಅಪಘಾತದಲ್ಲಿ ಬಹಳಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯೊಂದಿಗೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಪ್ರತಿ ವರ್ಷ 1.35 ದಶಲಕ್ಷಕ್ಕೂ ಹೆಚ್ಚು ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿದು ಬಂದಿದೆ. ಪ್ರತಿದಿನ ಸುಮಾರು 3,700 ಜನರು ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಕಂಪೇರ್ ಮಾರ್ಕೆಟ್ ಆಸ್ಟ್ರೇಲಿಯ ಎಂಬ ಹೆಸರಿನ ಸಾಗರೋತ್ತರ ಸಂಸ್ಥೆಯು ವಿಶ್ವಾದ್ಯಂತ ಚಾಲಕರ ಡೇಟಾವನ್ನು ಮತ್ತು ಜಾಗತಿಕವಾಗಿ ಕಾರು ಅಪಘಾತಗಳನ್ನು ಬಹಿರಂಗಪಡಿಸುವ ಅಧ್ಯಯನವನ್ನು ಬಿಡುಗಡೆ ಮಾಡಿದೆ.
ಅಧ್ಯಯನದ ಪ್ರಕಾರ ವಿಶ್ವದ ಅತ್ಯುತ್ತಮ ನುರಿತ ಚಾಲಕರನ್ನು ಹೊಂದಿರುವ ಪಟ್ಟಿಯಲ್ಲಿ ಜಪಾನ್ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್, ನೆದರ್ಲ್ಯಾಂಡ್, ಜರ್ಮನಿ, ಕೆನಡಾ ಮತ್ತು ಸ್ಪೇನ್ ನಂತರದ ಸ್ಥಾನದಲ್ಲಿದೆ.
ಪಟ್ಟಿಯಲ್ಲಿ ಭಾರತವು 17ನೇ ಸ್ಥಾನದಲ್ಲಿದೆ. ನುರಿತ ಚಾಲಕರನ್ನು ಹೊಂದಿರುವ 20 ದೇಶಗಳ ಪೈಕಿ ಭಾರತವು 17 ಸ್ಥಾನದಲ್ಲಿರೋದು ಸಾಕಷ್ಟು ನಿರಾಶಾದಾಯಕವಾಗಿದೆ.
ಸಂಶೋಧನೆಯ ಪ್ರಕಾರ ಜಪಾನಿನ ಮಹಿಳಾ ಮತ್ತು ಪುರುಷ ಚಾಲಕರ ನಡುವೆ ಕಡಿಮೆ ವ್ಯತ್ಯಾಸವಿದೆ. ಪುರುಷ ಚಾಲಕರು ಮಹಿಳಾ ಚಾಲಕರಿಗಿಂತ ಕೇವಲ ಶೇ.2.7 ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗುತ್ತಾರೆ. ಇಂಗ್ಲೆಂಡ್ ಅತ್ಯಂತ ಕಡಿಮೆ ರಸ್ತೆ ಮರಣ ಪ್ರಮಾಣವನ್ನು ಹೊಂದಿದೆ. ಪ್ರತಿ 100,000 ಜನರಿಗೆ ಕೇವಲ 6.4 ಮಾರಣಾಂತಿಕ ಅಪಘಾತಗಳು ಸಂಭವಿಸುತ್ತವೆ. ದಕ್ಷಿಣ ಆಫ್ರಿಕಾವು 100,000 ಜನರಿಗೆ 34.9 ಪುರುಷ ಮತ್ತು 9.9 ಮಹಿಳಾ ಅಪಘಾತ ಹೊಂದಿದೆ.
ಪುರುಷ ಮತ್ತು ಮಹಿಳಾ ಚಾಲಕರ ನಡುವಿನ ಅತಿದೊಡ್ಡ ಲಿಂಗ ಅಂತರದಲ್ಲಿ ದಕ್ಷಿಣ ಆಫ್ರಿಕಾವು ಮತ್ತೊಮ್ಮೆ ಎದ್ದು ಕಾಣುತ್ತದೆ. ಪುರುಷ ಚಾಲಕರು ಮಹಿಳೆಯರಿಗಿಂತ ಹೆಚ್ಚು ಅಪಘಾತಗಳಿಗೆ ಕಾರಣಕರ್ತರಾಗಿದ್ದಾರೆ. ನಂತರ ಬ್ರೆಜಿಲ್, ಕೊಲಂಬಿಯಾ ಮತ್ತು ಭಾರತ ಸ್ಥಾನ ಪಡೆದಿವೆ.