![Rajinikanth's Jailer: Japanese Couple Travels From Osaka To Chennai For First Day First Show](https://static.india.com/wp-content/uploads/2023/08/india.com-2-5.png)
ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಬರೋ ತನಕ ಮಾತ್ರ ಬೇರೆಯವರ ಸಿನೆಮಾ ಹವಾ. ಯಾವಾಗ ಇವರ ಸಿನೆಮಾ ರಿಲೀಸ್ ಆಗುತ್ತೋ, ಆಗ ಅವರ ಸಿನೆಮಾದ್ದೇ ಹವಾ. ಈ ಮಾತು ಈಗ ಮತ್ತೆ ಪ್ರೂವ್ ಆಗಿದೆ. ನಟ ರಜನಿಕಾಂತ್ ಸಿನೆಮಾ ’ಜೈಲರ್’ ರೀಲಿಸ್ ಸುದ್ದಿ ಕೇಳಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.
ಅಂತಹ ಕ್ರೇಜಿ ಅಭಿಮಾನಿಗಳು ಕೇವಲ ಭಾರತದಲ್ಲಿ ಮಾತ್ರ ಅಲ್ಲ…… ವಿದೇಶದಲ್ಲೂ ಇದ್ದಾರೆ. ಅವರಿಗೂ ಕೂಡ ರಜನಿ ಅಭಿನಯದ ’ಜೈಲರ್’ ಸಿನೆಮಾ ಫಸ್ಟ್ ಡೇ-ಫಸ್ಟ್ ಶೋ ನೋಡಬೇಕು ಅನ್ನೊ ಕನಸು. ಅದೇ ಕನಸನ್ನ ಈಡೇರಿಸಿಕೊಳ್ಳೊದಕ್ಕೆ ಜಪಾನ್ನಿಂದ ನೇರವಾಗಿ ಚೆನ್ನೈಗೆ ಬಂದಿದ್ದಾರೆ.
ʼಜೈಲರ್’ ಚಿತ್ರವನ್ನ ಮೊದಲ ದಿನವೇ ಕಣ್ತುಂಬಿಕೊಳ್ಳಬೇಕೆಂದು ಜಪಾನ್‌ನಿಂದ ಯಸುದಾ ಹಿಡೆತೊಶಿ ಜೋಡಿ ಚೆನ್ನೈಗೆ ಬಂದಿದ್ದಾರೆ…! ಇದು ನಂಬೋದು ಕಷ್ಟ ಆದರೂ ಇದೇ ನಿಜ. ಜಪಾನ್‌ನ ಒಸಾಕಾದಿಂದ ಬಂದಿರುವ ಈ ದಂಪತಿ, ‘ಜೈಲರ್’ ಸಿನಿಮಾ ನೋಡಿ ಫುಲ್ ಎಂಜಾಯ್ ಮಾಡಿದ್ದಾರೆ. ಅವರ ಮುಖಭಾವ ನೋಡ್ತಿದ್ರೆ ಗೊತ್ತಾಗುತ್ತಿತ್ತು ಜಪಾನ್‌ನಿಂದ ಭಾರತಕ್ಕೆ ಬಂದು ಚಿತ್ರ ವೀಕ್ಷಿಸಿದ್ದಕ್ಕೆ ಸಾರ್ಥಕವಾಯ್ತು ಅಂತ.
ಇಲ್ಲಿ ಅಚ್ಚರಿಯ ವಿಷಯ ಏನಂದರೆ ‘’ನಾವು ‘ಜೈಲರ್’ ಸಿನಿಮಾ ವೀಕ್ಷಿಸುವ ಸಲುವಾಗಿ ಜಪಾನ್‌ನಿಂದ ಚೆನ್ನೈಗೆ ಬಂದಿದ್ದೇವೆ’’ ಅನ್ನುವುದನ್ನ ಅವರು ಅಚ್ಚ ತಮಿಳು ಭಾಷೆಯಲ್ಲೇ ಹೇಳಿದ್ದಾರೆ. ಅದರ ಜೊತೆ ಜೊತೆಗೆ ರಜನಿಕಾಂತ್ ಅವರ ಡೈಲಾಗ್‌ಗಳನ್ನೂ ಪಟಪಟ ಹೇಳಿದ್ದಾರೆ. ಅಸಲಿಗೆ, ಯಸುದಾ ಹಿಡೆತೋಶಿ ಎಂಬುವರು ಜಪಾನ್‌ನಲ್ಲಿ ‘ರಜನಿಕಾಂತ್ ಫ್ಯಾನ್ ಕ್ಲಬ್ ಲೀಡರ್’ ಅಂತೆ. ಇವರಿಗೆ ರಜನಿಕಾಂತ್ ಅಭಿನಯದ ‘ಮುತ್ತು’, ‘ಭಾಷಾ’ ಚಿತ್ರಗಳು ಸಿಕ್ಕಾಪಟ್ಟೆ ಇಷ್ಟವಂತೆ. ಅಭಿಮಾನಿ ಅನ್ನೊದಕ್ಕಿಂತ ಇದಕ್ಕಿಂತ ಹೆಚ್ಚಿನ ಸಾಕ್ಷಿ ಇನ್ನೇನು ಬೇಕು ಅಲ್ವಾ..!
ಇನ್ನೂ ಇದೇ ಸಿನೆಮಾದಲ್ಲಿ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಅವರು ಕೂಡ ನಟಿಸಿದ್ಧಾರೆ. ತೆರೆಮೇಲೆ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ಅವರನ್ನ ಕಂಡ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಂದ್ಹಾಗೆ, ‘ಜೈಲರ್’ ಚಿತ್ರದಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಸುನೀಲ್, ನಾಗಬಾಬು, ಕಿಶೋರ್ ಸೇರಿದಂತೆ ದೊಡ್ಡ ತಾರಾ ಬಳಗ ಇದೆ.
ಈಗಾಗಲೇ ಅನಿರುದ್ಧ್ ರವಿಚಂದರ್ ಸಂಗೀತ ನೀಡಿರುವ ‘ಜೈಲರ್’ ಸಿನಿಮಾದ ‘ನು ಕಾವಾಲಯ್ಯ’ ಹಾಡು ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಹಿಟ್ ಆಗಿದೆ. ತಮನ್ನಾ ಡ್ಯಾನ್ಸ್‌ಗೆ ಫ್ಯಾನ್ಸ್ ಕ್ಲೀನ್ ಬೌಲ್ಡ್ ಆಗಿದ್ದು, ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ‘ನು ಕಾವಾಲಯ್ಯ’ ರೀಲ್ಸ್ ತುಂಬಿ ತುಳುಕುತ್ತಿವೆ.
ಈಗಾಗಲೇ ತಲೈವಾ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೈಲರ್’ ತೆರೆಗೆ ಬಂದಿದ್ದು, ವಿಶ್ವದಾದ್ಯಂತ ‘ಜೈಲರ್’ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ಈಗಾಗಲೇ ಬೆಂಗಳೂರಿನಲ್ಲೂ ತೆರೆ ಕಂಡಿರುವ ಈ ಸಿನೆಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.