ಇಂದಿನ ಹಣದುಬ್ಬರ ಹಾಗೂ ವಿಪರೀತ ಪೈಪೋಟಿಯ ಯುಗದಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಬಹುತೇಕ ದೇಶಗಳಲ್ಲಿ ದಂಪತಿಗಳು ಹಿಂದೆ ಮುಂದೆ ಯೋಚಿಸುವಂತೆ ಆಗಿದೆ.
ಆದರೆ ಕೆಲ ದೇಶಗಳಲ್ಲಿ ನಿರಂತರವಾಗಿ ಜನನ ಪ್ರಮಾಣ ಕುಸಿಯುತ್ತಿರುವ ಕಾರಣ ಮಕ್ಕಳನ್ನು ಮಾಡಿಕೊಳ್ಳುವ ಜನರಿಗೆ ಪ್ರೋತ್ಸಾಹ ಧನ ನೀಡಲು ಅಲ್ಲಿನ ಸರ್ಕಾರಗಳು ಮುಂದಾಗಿವೆ. ಅಂಥ ದೇಶಗಳ ಪಟ್ಟಿ ಇಂತಿದೆ:
ಜಪಾನ್
ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದು, ಬೃಹತ್ ಆರ್ಥಿಕ ಶಕ್ತಿಯನ್ನು ಮುನ್ನಡೆಸಿಕೊಂಡು ಸಾಗಬಲ್ಲ ಜನಾಂಗದ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಜಪಾನ್ನಲ್ಲಿ ಯುವಕರಿಗೆ ಮದುವೆ ಹಾಗೂ ಸಂಬಂಧಗಳ ಮೇಲೆ ಆಸಕ್ತಿ ಕ್ಷೀಣಿಸುತ್ತಾ ಬಂದಿದೆ. ಇದರಿಂದಾಗಿ ಮಗು ಹೆರುವ ಪ್ರತಿಯೊಂದು ಜೋಡಿಗೆ ತಲಾ ಆರು ಲಕ್ಷ ರೂ. ಗಳ ಇನಾಮು ಕೊಡಲು ಅಲ್ಲಿನ ಸರ್ಕಾರ ಮುಂದಾಗಿದೆ.
ರಷ್ಯಾ
ಮಕ್ಕಳನ್ನು ಹೊಂದಲು ಯೋಜಿಸುತ್ತಿರುವ ದಂಪತಿಗೆ ರಷ್ಯಾದಲ್ಲಿ ಸೆಪ್ಟೆಂಬರ್ 12ರಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಕುಟುಂಬವೊಂದರಲ್ಲಿ ಮಗು ಜನಿಸಿದರೆ, ಆ ಜೋಡಿಗೆ ಮನೆ, ಕಾರು ಹಾಗೂ ಮಕ್ಕಳನ್ನು ಸಾಕಿ ಸಲಹಲು ಎಲೆಕ್ಟ್ರಾನಿಕ್ ಸರಕುಗಳನ್ನು ಕೊಡಲಾಗುತ್ತದೆ. ಎರಡನೇ ಅಥವಾ ಮೂರನೇ ಮಗು ಜನಿಸಿದರೆ ತಾಯಂದಿರಿಗೆ ಏಳು ಲಕ್ಷ ರೂ. ಗಳನ್ನು ನೀಡಲಾಗುತ್ತದೆ.
ರೊಮಾನಿಯಾ
ಮಕ್ಕಳನ್ನು ಹೊಂದುವ ದಂಪತಿಗಳಿಗೆ ತೆರಿಗೆ ವಿನಾಯಿತಿ ಕೊಡುತ್ತಿದೆ ರೊಮಾನಿಯಾ ಸರ್ಕಾರ. ಇದೇ ವೇಳೆ, ಮಕ್ಕಳನ್ನು ಮಾಡಿಕೊಳ್ಳದ ದಂಪತಿಗಳಿಗೆ 20 ಪ್ರತಿಶತ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತದೆ.
ಬೆಲರೂಸ್
ಬೆಲರೂಸ್ನಲ್ಲಿ ಮಗು ಜನಿಸಿದ ಮೂರು ವರ್ಷಗಳವರೆಗೂ ಅಲ್ಲಿನ ಸರ್ಕಾರ ದಂಪತಿಗಳಿಗೆ ನೆರವು ನೀಡುತ್ತದೆ. ಮಗು ಜನಿಸಿದ ಕೂಡಲೇ ದಂಪತಿಗೆ 1.28 ಲಕ್ಷ ರೂ. ಗಳನ್ನು ಇಲ್ಲಿ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಅದರ ಆರೈಕೆಗೆಂದು ಮೂರು ವರ್ಷಗಳವರೆಗೂ ಪ್ರತಿ ತಿಂಗಳೂ ದಂಪತಿಗೆ 18,000 ರೂ.ಗಳನ್ನು ಕೊಡಲಾಗುತ್ತದೆ.
ಫಿನ್ಲೆಂಡ್
ಮಕ್ಕಳನ್ನು ಮಾಡಿಕೊಳ್ಳುವ ದಂಪತಿಗಳಿಗೆ ಫೆನ್ಲೆಂಡ್ನ ಲೆಸ್ತಿಯಾರ್ವಿ ಪುರಸಭೆಯಲ್ಲಿ ಬೇಬಿ ಬೋನಸ್ ಕೊಡಲಾಗುತ್ತದೆ. ಮಗು ಜನಿಸಿದ ದಿನದಂದೇ ಜೋಡಿಗೆ 7.86 ಲಕ್ಷ ರೂ. ಗಳನ್ನು ನೀಡಲಾಗುತ್ತದೆ. ಫಿನ್ಲೆಂಡ್ನಲ್ಲಿ ಜನಸಂಖ್ಯೆಯ ಆತಂಕಕಾರಿ ಮಟ್ಟದಲ್ಲಿ ಕ್ಷೀಣಿಸುತ್ತಿರುವ ಕಾರಣ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.