ಎರಡು ವರ್ಷಗಳ ನಂತರ ವಿದೇಶಿ ಪ್ರವಾಸಿಗರು ತನ್ನ ದೇಶಕ್ಕೆ ಪ್ರಯಾಣ ಮಾಡಲು ಜಪಾನ್ ಅವಕಾಶ ಕಲ್ಪಿಸಿದೆ. ಆದರೆ, ಹಲವಾರು ಷರತ್ತುಗಳನ್ನು ವಿಧಿಸಿದೆ.
ಕೋವಿಡ್-19 ಮಹಾಮಾರಿಯಿಂದಾಗಿ ವಿದೇಶಿಗರ ಪ್ರವೇಶಕ್ಕೆ ಜಪಾನ್ ಕಳೆದ ಎರಡು ವರ್ಷಗಳ ಹಿಂದೆ ನಿರ್ಬಂಧ ಹೇರಿತ್ತು. ಆದರೀಗ ಪರಿಸ್ಥಿತಿ ಸುಧಾರಿಸಿರುವುದರಿಂದ ಜೂನ್ 10 ರಿಂದ ಪ್ರವೇಶಕ್ಕೆ ಅವಕಾಶ ನೀಡುತ್ತಿದೆ. ಆದರೆ, ಕೇವಲ ಪ್ಯಾಕೇಜ್ ಟೂರ್ ನಲ್ಲಿ ಬರುವ ಪ್ರವಾಸಿಗರಿಗೆ ಮಾತ್ರ ಈ ಅವಕಾಶವಿದೆ.
ಪ್ರವಾಸಿಗರನ್ನು ಕರೆ ತರುವ ಟ್ರಾವೆಲ್ ಏಜೆನ್ಸಿಗಳು ಕಡ್ಡಾಯವಾಗಿ ಪ್ರವಾಸಿಗರೊಂದಿಗೆ ತಮ್ಮ ಗೈಡ್ ಅನ್ನು ಕಳುಹಿಸಬೇಕು ಮತ್ತು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ನಿಬಂಧನೆ ವಿಧಿಸಿದೆ.
ಇದಲ್ಲದೇ, ಜಪಾನ್ ಗೆ ಭೇಟಿ ನೀಡುವ ಪ್ರವಾಸಿಗರು ಖಾಸಗಿ ವೈದ್ಯಕೀಯ ಇನ್ಶೂರೆನ್ಸ್ ಪಡೆದಿರಬೇಕು. ಜೂನ್ 10 ರಿಂದ ಆರಂಭವಾಗಲಿರುವ ಮೊದಲ ಹಂತದಲ್ಲಿ ಕೇವಲ ಟೂರಿಸ್ಟ್ ಪ್ಯಾಕೇಜ್ ನಲ್ಲಿ ಬರುವ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಟೂರ್ ಗೈಡ್ ಗಳು ಕಾಲಕಾಲಕ್ಕೆ ತಮ್ಮೊಂದಿಗೆ ಇರುವ ಪ್ರವಾಸಿಗರಿಗೆ ಸೋಂಕು ತಡೆಗಟ್ಟುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಮನವರಿಕೆ ಮಾಡಿಕೊಡಬೇಕು. ಪ್ರವಾಸದ ಪ್ರತಿ ಹಂತದಲ್ಲಿಯೂ ಪ್ರವಾಸಿಗರು ಮಾಸ್ಕ್ ಧರಿಸುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಜಪಾನ್ ಸರ್ಕಾರ ಸೂಚನೆ ನೀಡಿದೆ.