ಸ್ಟ್ರೆಪ್ಟೋಕೊಕಲ್ ವಿಷಕಾರಿ ಶಾಕ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆಯೊಂದು ಜಪಾನ್ ನಲ್ಲಿ ಪತ್ತೆಯಾಗಿದೆ. ಇದು ಮಾಂಸ ತಿನ್ನುವ ಬ್ಯಾಕ್ಟಿರಿಯಾ ಕಾಯಿಲೆಯಾಗಿದ್ದು, ಈ ಬ್ಯಾಕ್ಟಿರಿಯಾದಿಂದ ವ್ಯಕ್ತಿ 48 ಗಂಟೆಗಳಲ್ಲೇ ಸಾವನ್ನಪ್ಪುತ್ತಾನೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಕೋವಿಡ್ ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜಪಾನ್ ಜನತೆಯಲ್ಲಿ ಇಂತದ್ದೊಂದು ಮಾರಣಾಂತಿಕ ಬ್ಯಾಕ್ಟಿರಿಯಾ ಆತಂಕವನ್ನು ಹೆಚ್ಚಿಸಿದೆ. ಬ್ಲೂಮ್ ಬರ್ಗ್ ವರದಿ ಪ್ರಕಾರ ಜಪಾನ್ ನಲ್ಲಿ ಈ ವರ್ಷ ಜೂನ್ 2ರವ ವೇಳೆಗೆ ಸ್ಟ್ರೆಪ್ಟೋಕೊಕಲ್ ವಿಷಕಾರಿ ಶಾಕ್ ಸಿಂಡ್ರೋಮ್ ಕಾಯಿಲೆಯನ್ನು ಹೊಂದಿರುವ 977 ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ ವರ್ಷ ಈ ಕಾಯಿಲೆಯ 941 ಪ್ರಕರಣಗಳು ಪತ್ತೆಯಾಗಿದ್ದವು. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಪ್ರಕರಣ ಬೆಳಕಿಗೆ ಬಂದಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.
1999ರಿಂದಲೂ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆಯು ಈ ಕಾಯಿಲೆಯ ಪತ್ತೆ ಕಾರ್ಯ ಮಾಡುತ್ತಿದೆ. ಗ್ರೂಪ್ A ಸ್ಟ್ರೆಪ್ಟೋಕೊಕಸ್ ರೋಗವು ಮಕ್ಕಳಲ್ಲಿ ಸಾಮಾನ್ಯವಾಗಿ ‘ಸ್ಟ್ರೆಪ್ ಥ್ರೋಟ್’ ಎಂದು ಕರೆಯಲ್ಪಡುವ ಊತ ಮತ್ತು ಗಂಟಲು ನೋವಿಗೆ ಕಾರಣವಾಗುತ್ತದೆ. ಕೆಲವು ರೀತಿಯ ಬ್ಯಾಕ್ಟಿರಿಯಾಗಳು ಗಂಟು ನೋವು, ಅಂಗಾಗಳ ನೋವು, ಊತ, ಜ್ವರ, ಕಡಿಮೆ ರಕ್ತದೊತ್ತಡ ಸೇರಿದಂತೆ ವಿವಿಧ ರೋಗಲಕ್ಷಣಗಳನ್ನು ವೇಗವಾಗಿ ಹೆಚ್ಚಿಸುತ್ತವೆ. ಅಲ್ಲದೇ ಮುಂದೆ ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯದಿಂದಾಗಿ ಸಾವು ಸಂಭವಿಸಲು ಕಾರಣವಾಗುತ್ತದೆ ಎಂದು ತಿಳಿಸಿದೆ.
ಈ ಬ್ಯಾಕ್ಟಿರಿಯಾದಿಂದಾಗಿ 48 ಗಂಟೆಗಳ ಒಳಗೆ ಸಾವು ಸಂಭವಿಸುತ್ತದೆ ಎಂದು ಟೋಕಿಯೊದ ಮಹಿಳಾ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರೊಫೆಸರ್ ಕೆನ್ ಕಿಚುಚಿ ತಿಳಿಸಿದ್ದಾರೆ. 50 ವರ್ಷ ದಾಟಿದ ಜನರು ಈ ರೋಗಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ.
ಪ್ರಸ್ತುತ ಸೋಂಕಿನ ವೇಗ ನೋಡಿದೆ ಈ ವರ್ಷ ಜಪಾನ್‌ನಲ್ಲಿ ಈ ಪ್ರಕರಣಗಳ ಸಂಖ್ಯೆ 2,500 ತಲುಪಬಹುದು. ಶೇ. 30ರಷ್ಟು ಸಾವು ಸಂಭವಿಸಬಹುದು ಎಂದು ಕಿಕುಚಿ ಹೇಳಿದ್ದಾರೆ. ಮಾಂಸ ತಿನ್ನುವ ಬ್ಯಾಕ್ಟಿರಿಯಾದ ಬಗ್ಗೆ ಜನರಿಗೆ ಅವರು ಹಾಗೂ ಕೆಲ ಮಾರ್ಗಸೂಚಿ ನೀಡಬೇಕು. ಕೈಗಳ ಶುಚಿತ್ವ, ಗಾಯಗಳಿಗೆ ಬೇಗ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.