
ಜಪಾನ್‌ನ ಸಂಸತ್ತು ವಿಚ್ಛೇದಿತ ಗಂಡ ಹೆಂಡ್ತಿ ಇಬ್ಬರಿಗೂ ಮಕ್ಕಳ ಪಾಲನೆಯ ಆಯ್ಕೆಯನ್ನು ಅನುಮತಿಸುವ ಕಾನೂನಿನ ಮಸೂದೆಯನ್ನು ಇತ್ತೀಚೆಗೆ ಅಂಗೀಕರಿಸಿದೆ. ಇದು 77 ವರ್ಷಗಳಲ್ಲೇ ಪೋಷಕರ ಅಧಿಕಾರದ ಕಾನೂನುಗಳಿಗೆ ಮೊದಲ ತಿದ್ದುಪಡಿಯಾಗಿದೆ. ಸಂಸತ್ತಿನ ಮೇಲ್ಮನೆ ಶುಕ್ರವಾರ ಮಸೂದೆಯನ್ನು ಅಂಗೀಕರಿಸಿತು.
ಶಾಸನವು ವಿಚ್ಛೇದಿತ ಪೋಷಕರಿಗೆ ತಮ್ಮ ಮಕ್ಕಳನ್ನು ಜಂಟಿಯಾಗಿ ಪೋಷಿಸುವ ಅಥವಾ ಒಬ್ಬರೇ ಪಾಲನೆ ಮಾಡುವ ಬಗ್ಗೆ ನಿರ್ಧರಿಸುವ ಅವಕಾಶವನ್ನು ನೀಡುತ್ತದೆ. ಇದುವರೆಗೂ ವಿಚ್ಛೇದನದ ನಂತರ ಒಬ್ಬ ಪೋಷಕರು ಮಾತ್ರ ಮಗುವನ್ನು ತಮ್ಮ ಅಸ್ತಿತ್ವದಲ್ಲಿ ಇಟ್ಟುಕೊಂಡು ಪೋಷಿಸುವ ಹಕ್ಕನ್ನು ಹೊಂದಿದ್ದರು. ಸದ್ಯ ಈ ಕಾನೂನಿನಲ್ಲಿ ತಿದ್ದುಪಡಿಯಾಗಿದ್ದು ಇಬ್ಬರಿಗೂ ಅವಕಾಶ ನೀಡಲಾಗಿದೆ.
ಈ ವೇಳೆ ವಿವಾದ ಉಂಟಾದಲ್ಲಿ ಕೌಟುಂಬಿಕ ನ್ಯಾಯಾಲಯವು ಮಧ್ಯಪ್ರವೇಶಿಸಿ ಮಗುವಿನ ಕಸ್ಟಡಿ ವ್ಯವಸ್ಥೆಗಳನ್ನು ನಿರ್ಧರಿಸುತ್ತದೆ. ಪೋಷಕರಿಂದ ಕೌಟುಂಬಿಕ ಹಿಂಸಾಚಾರ ಅಥವಾ ನಿಂದನೆಯಾಗುತ್ತಿದ್ದರೆ, ಪರಿಷ್ಕರಣೆ ನಂತರ ಮತ್ತೊಬ್ಬ ಪೋಷಕರಿಗೆ ಏಕೈಕ ಪಾಲನೆ ಹಕ್ಕನ್ನು ನೀಡಲಾಗುತ್ತದೆ.
ನವೀಕರಿಸಿದ ಕಾನೂನನ್ನು ಪ್ರಕಟಿಸಿದ ಎರಡು ವರ್ಷಗಳೊಳಗೆ ಜಾರಿಗೆ ಬರಲಿದೆ ಮತ್ತು ಈಗಾಗಲೇ ವಿಚ್ಛೇದನ ಪ್ರಕ್ರಿಯೆಗೆ ಒಳಗಾದ ಜನರಿಗೆ ಪೂರ್ವಭಾವಿಯಾಗಿ ಅನ್ವಯಿಸಲಾಗುತ್ತದೆ.