ಟೋಕಿಯೊ: ಭೂಕಂಪ ಪೀಡಿತ ಜಪಾನ್ ನಲ್ಲಿ ಮತ್ತೊಂದು ದುರಂತವೊಂದು ಸಂಭವಿಸಿದ್ದು, ಪ್ರಯಾಣಿಕರ ವಿಮಾನವೊಂದು ಲ್ಯಾಂಡಿಂಗ್ ವೇಳೆ ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ನೋಡ ನೋಡುತ್ತಿದ್ದಂತೆ ವಿಮಾನ ರನ್ ವೇಯಲ್ಲಿಯೇ ಹೊತ್ತಿ ಉರಿದಿದೆ.
ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಈ ದುರಂತ ಸಂಭವಿಸಿದ್ದು, ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಜಪಾನ್ ಏರ್‌ಲೈನ್ಸ್ ಗೆ ಸೇರಿದ ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ.
ವಿಮಾನದಲ್ಲಿ 367 ಪ್ರಯಾಣಿಕರಿದ್ದರು. ಅದೃಷ್ಟ ವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ವಿಮಾನದ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿ ವಿಮಾನದಿಂದ ಹೊರತಂದಿದ್ದಾರೆ.
ವಿಮಾನದಲ್ಲಿದ್ದ ಎಲ್ಲಾ 367 ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ.