ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸುವ ಉದ್ಧೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸೆ.26 ರಂದು ಜಿಲ್ಲಾಮಟ್ಟದ “ಜನತಾ ದರ್ಶನ” ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾಮಟ್ಟದಲ್ಲಿ ಸಾರ್ವಜನಿಕ ಅಹವಾಲುಗಳಿಗೆ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಪ್ರತಿ ತಿಂಗಳು “ಜನತಾ ದರ್ಶನ” ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸುವ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂತೆ ಜನತಾದರ್ಶನ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿರುತ್ತಾರೆ.ಈ ಹಿನ್ನೆಲೆಯಲ್ಲಿ ಸೆ.26 ರಂದು ಜನತಾದರ್ಶನ ನಡೆಯಲಿದೆ.
ಪ್ರತಿ ತಿಂಗಳು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ:
ಜಿಲ್ಲೆಯ ಯಾವುದೇ ಭಾಗದಲ್ಲಿನ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಪ್ರತಿ ತಿಂಗಳು ಜನತಾ ದರ್ಶನ ನಡೆಯಲಿದ್ದು, ಸಾರ್ವಜನಿಕರ ಅಹವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು.
ಇದೇ ರೀತಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ದ ಒಂದೊಂದು ತಾಲ್ಲೂಕಿನಲ್ಲಿ ಕೂಡ ಜನತಾ ದರ್ಶನ ಹಮ್ಮಿಕೊಳ್ಳಲಾಗುವುದು.
ಸ್ಥಳದಲ್ಲಿಯೇ ಸಮಸ್ಯೆಗಳ ಪರಿಹಾರಕ್ಕೆ ನಿರ್ದೇಶನ:
ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಅಹವಾಲುಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗೆಹರಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು.
ಪ್ರತಿಯೊಂದು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಜತೆ ಕಡ್ಡಾಯವಾಗಿ ಉಪಸ್ಥಿತರಿರಬೇಕು.
ಪ್ರತಿಯೊಂದು ಅರ್ಜಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗನೇ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರಕಾರದ ಹಂತದಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಿದ್ದರೆ ಕೂಡಲೇ ಅದನ್ನು ಸಂಬಂಧಿಸಿದವರಿಗೆ ಕಳುಹಿಸಬೇಕು.
ಜಿಲ್ಲೆಯ ಸಾರ್ವಜನಿಕರಿಂದ ಬರುವ ಕುಂದುಕೊರತೆ ಅರ್ಜಿಗಳನ್ನು ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್) ಪೋರ್ಟಲ್‌ದಲ್ಲಿ ನೊಂದಣಿ ಮಾಡಬೇಕಾಗುತ್ತದೆ. ಹೀಗೆ ಅರ್ಜಿ ನೋಂದಣಿಯಾದ ಕೂಡಲೇ ಅರ್ಜಿದಾರರ ದೂರವಾಣಿ ಸಂಖ್ಯೆಗೆ ಸ್ವೀಕೃತಿ ಕುರಿತು ಮಾಹಿತಿ ಕೂಡ ರವಾನೆಯಾಗಲಿದೆ. ಅದರಂತೆ ನಿಗದಿತ ಸಮಯದೊಳಗೆ ಇತ್ಯರ್ಥ ಪಡಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ಅಂದು ಸ್ವೀಕರಿಸುವ ಅರ್ಜಿಗಳ ಮೇಲೆ ಅವಶ್ಯಕ ಕ್ರಮಕೈಗೊಳ್ಳುವ ಬಗ್ಗೆ ಪೂರ್ವಭಾವಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು.
ಅರ್ಜಿಗಳನ್ನು ಸ್ವೀಕರಿಸುವ ವಿಧಾನ, ಅವಶ್ಯಕ ದಾಖಲಾತಿಗಳ ಬಗ್ಗೆ ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೂಲಕ ನಾಗರಿಕರಲ್ಲಿ ಸೂಕ್ತ ಅರಿವು ಮೂಡಿಸುವುದರ ಜತೆಗೆ ಜನತಾ ದರ್ಶನದಲ್ಲಿ ಪ್ರತ್ಯೇಕ ಕೌಂಟರ್ ತೆರೆಯುವ ಬಗ್ಗೆಯು ಅರಿವು ಮೂಡಿಸಬೇಕು.
ಜನತಾ ದರ್ಶನ ನಡೆಯುವ ಸಂದರ್ಭದಲ್ಲಿ ಆರೋಗ್ಯ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಇಲಾಖೆಗಳು ಸರಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿಯನ್ನು ಒದಗಿಸಬೇಕು.