ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಗೈರು ಹಾಜರಾದ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಸ್ವಾಮೀಜಿಯೊಬ್ಬರ ತಂಗಿ ಮದುವೆಗಾಗಿ ಜೈಪುರಕ್ಕೆ ನಾನು ಹೋಗಿದ್ದೆ. ಹಾಗಾಗಿ ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಹೋಗಿರಲಿಲ್ಲ ಎಂದು ಬಳ್ಳಾರಿಯಲ್ಲಿ ಹೇಳಿದ್ದಾರೆ.
ಈ ವಿಚಾರದಲ್ಲಿ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಾಜಕೀಯ ಹೊರತುಪಡಿಸಿ ನಾನು ಮತ್ತು ಜನಾರ್ಧನ ರೆಡ್ಡಿ ಸ್ನೇಹಿತರು. ಹೊಸ ಪಕ್ಷ ಕಟ್ಟುವ ವಿಚಾರ ಜನಾರ್ಧನ ರೆಡ್ಡಿ ಅವರ ವಿವೇಚನೆಗೆ ಬಿಟ್ಟಿದ್ದು. ಪಕ್ಷ ಕಟ್ಟುವ ವಿಚಾರದ ಬಗ್ಗೆ ಅವರು ನನ್ನ ಜೊತೆ ಚರ್ಚಿಸಿಲ್ಲ. ರಾಜಕೀಯವಾಗಿ ಎಲ್ಲೇ ಇದ್ದರೂ ಜನಾರ್ಧನ ರೆಡ್ಡಿಗೆ ಒಳ್ಳೆಯದಾಗಲಿ. ಕೆಲವು ವಿಚಾರದಲ್ಲಿ ಬಿಜೆಪಿ ಮೇಲೆ ಜನಾರ್ಧನ ರೆಡ್ಡಿಗೆ ಬೇಸರವಾಗಿದೆ. ಅವರು ಹೊಸ ಪಕ್ಷ ನೋಂದಣಿ ಮಾಡಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ. ರೆಡ್ಡಿ ಅಸಮಾಧಾನದ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.