ಗದಗ: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಗದಗದಲ್ಲಿ ಸಚಿವ ಬಿ. ಶ್ರೀರಾಮುಲು ಅವರ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಹೊಸ ಪಕ್ಷ ಕಟ್ಟುವ ಬಗ್ಗೆ ಇನ್ನೂ ಸಮಯ ಇದೆ. ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಮೂಲಕ ಸ್ಪರ್ಧೆಯ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಜನಾರ್ಧನ ರೆಡ್ಡಿ ಇಂಗಿತ ವ್ಯಕ್ತಪಡಿಸಿದ್ದಾರೆ. ನಮ್ಮ ಇಡೀ ರಾಜಕೀಯ ಜೀವನ ಆರಂಭವಾಗಿದ್ದೇ ಬಿಜೆಪಿಯಿಂದ. ಅಡ್ವಾಣಿ ಅವರ ರಥಯಾತ್ರೆಯಿಂದ ಸ್ಪೂರ್ತಿಗೊಂಡು ಬಿಜೆಪಿ ಸೇರಿದ್ದೆ. ನನ್ನ ದೇಹವನ್ನು ಎಲ್ಲಿ ಟಚ್ ಮಾಡಿದರೂ ಬಿಜೆಪಿ ಬಗ್ಗೆ ಅಭಿಮಾನ ಇರುತ್ತದೆ ಎಂದರು.
30 ವರ್ಷದಿಂದ ಬಿಜೆಪಿಯಲ್ಲಿ ಇದ್ದೇನೆ. ಬೇರೆ ಪಕ್ಷದಿಂದ ಬಿಜೆಪಿಗೆ ಬಂದಿಲ್ಲ. ನನ್ನ ದೇಹವನ್ನು ಎಲ್ಲಿ ಟಚ್ ಮಾಡಿದರೂ ಬಿಜೆಪಿ ಬಗ್ಗೆ ಅಭಿಮಾನ ಇರುತ್ತದೆ. ಪಕ್ಷದ ವರಿಷ್ಠರ ನಿರ್ಧಾರದ ಬಗ್ಗೆ ಕಾಯುತ್ತಿದ್ದೇನೆ. ಬಳ್ಳಾರಿಗೆ ತೆರಳದಂತೆ ನನಗೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ನನಗೆ ಬೆಂಗಳೂರಿನಲ್ಲಿ ಇರಲು ಇಷ್ಟವಿಲ್ಲ. ಹೀಗಾಗಿ ಗಂಗಾವತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.
ನನ್ನ ಮತ್ತು ಶ್ರೀರಾಮುಲು ಮಧ್ಯೆ ಭಿನ್ನಾಭಿಪ್ರಾಯ ಬರಲು ಸಾಧ್ಯವೇ ಇಲ್ಲ. ಎಂದೂ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರುವ ಸ್ಥಿತಿ ನಿರ್ಮಾಣವಾಗುವುದಿಲ್ಲ. ಇಡೀ ಜಗತ್ತು ಬೇರೆ, ನಾನು – ಶ್ರೀರಾಮುಲುನೇ ಬೇರೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಶ್ರೀರಾಮುಲು ಮನೆ ಅಂದರೆ ನನ್ನ ಮನೆ ಇದ್ದಂತೆ, ನನ್ನ ಮನೆ ಅಂದರೆ ರಾಮುಲು ಮನೆ ಇದ್ದಂತೆ. ನಮ್ಮಿಬ್ಬರದ್ದು ರಾಜಕೀಯಕ್ಕೂ ಮೀರಿದ ಸಂಬಂಧ ಎಂದು ಶ್ರೀರಾಮುಲು ಅವರೇ ಹೇಳಿದ್ದಾರೆ. ಹೀಗಾಗಿ ಮುನಿಸು ಬರಲ್ಲ. ಎಂದಿಗೂ ಭಿನ್ನಾಭಿಪ್ರಾಯ ಬರುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಗದಗದಲ್ಲಿ ಶ್ರೀರಾಮುಲು ಮನೆಗೆ ಭೇಟಿ ಬಳಿಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.