ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರವಾಗಿ ಮಾತನಾಡಿರುವ ಶಾಸಕ ಜನಾರ್ಧನ ರೆಡ್ಡಿ, ಸಿದ್ದರಾಮಯ್ಯನವರಿಗೆ ನೈತಿಕತೆ ಎಂಬುದು ಗೊತ್ತಿದ್ದರೆ ರಾಜೀನಾಮೆ ನೀಡುಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ, ಆರೋಪ ಕೇಳಿಬಂದ ತಕ್ಷಣ ಈ ಹಿಂದೆಯೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿತ್ತು. ಈಗಲಾದರೂ ತಕ್ಷಣ ರಾಜೀನಾಮೆ ಕೊಟ್ಟರೆ ಗೌರವ ಇರುತ್ತಿತ್ತು. ಬೆಳಿಗ್ಗೆ ಎದ್ದರೆ ನೈತಿಕತೆ ಮತ್ತು ಕಾನೂನು ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು.
ಈ ಹಿಂದೆ ಸಿದ್ದರಾಮಯ್ಯನವರು ನನ್ನ ವಿರುದ್ಧ ಪಾದಯಾತ್ರೆ ಮಾಡಿದ್ದರು. ಬಳ್ಳಾರಿಗೆ ಪಾದಯಾತ್ರೆ ಬಂದಾಗ ರಿಪಬ್ಲಿಕ್ ಆಫ್ ಬಳ್ಳಾರಿ ಎಂದಿದ್ದರು. ನನ್ನ ಮನೆಯ ಕಾಂಪೌಂಡ್ ಗೋಡೆ ಬಗ್ಗೆಯೂ ಮಾತನಾಡಿದ್ದರು. ನನ್ನ ವಿರುದ್ಧ ಸಿಬಿಐ ತನಿಖೆ ಆದಾಗ ಸಂಪುಟದಿಂದ ಕಿತ್ತು ಹಾಕಿ ಅಂದಿದ್ರು. ಸಿದ್ದರಾಮಯ್ಯನವರೇ ನಿಮ್ಮ ಹಾಗೇ ನಾನು ಅಕ್ರಮವಾಗಿ ಹಣ ಮಾಡಿಲ್ಲ. ನ್ಯಾಯಯುತವಾಗಿ ಸಂಪಾದಿಸಿದ್ದೇನೆ ಎಂದು ಕಿಡಿಕಾರಿದರು.
ನನಗೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಈಗ ಮುಡಾದಲ್ಲಿ 64 ಕೋಟಿ ಕೇಳಿದ್ದಾರೆ. ನಿವೇಶನ ವಾಪಾಸ್ ಪಡೆಯಲಿ ಪರಿಹಾರವಾಗಿ 64 ಕೋಟಿ ಹಣ ಕೊಡಿಲಿ ಎಂದು ಹೇಳಿದ್ದೇಕೆ? ನಿಜವಾಗಿಯೂ ನೀವು ಕ್ಲೀನ್ ಆಗಿದ್ದರೆ ತನಿಖೆಯನ್ನು ಎದುರಿಸಿ. ಈಗಾಗಲೇ ನಿಮಗೆ 64 ವಯಸ್ಸಾಗಿದೆ. ಸಮಯ ಬಹಳ ಕಡಿಮೆಯಿದೆ ಎಂದು ಟಾಂಗ್ ನೀಡಿದ್ದಾರೆ.