ರಾಯಚೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಭರ್ಜರಿಯಾಗಿ ಸಂಘಟನೆ, ಪ್ರಚಾರ ಆರಂಭಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಯ ಮುಖಂಡರು ಸಿಬಿಐ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಛೂ ಬಿಟ್ಟಿದ್ದಾರೆ ಎಂದು ಹೇಳಿದ ಅವರು, ನೂರು ಜನ್ಮ ಎತ್ತಿ ಬಂದರೂ ತಮ್ಮ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ಸಿಂಧನೂರಿನಲ್ಲಿ ಕಾರ್ಯಕರ್ತರ ಬೃಹತ್ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2018ರಲ್ಲಿಯೇ ನಾನು ಪಕ್ಷ ಸ್ಥಾಪನೆಗೆ ಯೋಜನೆ ಹಾಕಿಕೊಂಡಿದ್ದೆ. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರಿಂದ ಅವರ ಸ್ಥಾನಕ್ಕೆ ಅಡ್ಡಿಯಾಗುತ್ತೇನೆ ಎಂದು ಹಿಂದೆ ಸರಿದಿದ್ದೆ. ನಾನು ಕಷ್ಟಪಟ್ಟು ದುಡಿದು ಹಣ ಸಂಪಾದಿಸಿ ಆಸ್ತಿ ಮಾಡಿದ್ದೇನೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಮುಖಂಡರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದಂತೆ ಬಿಜೆಪಿ ಸರ್ಕಾರ ಮತ್ತೆ ದಾಳಿ ನಡೆಸುವ ಭಯ ತೋರಿಸುತ್ತಿದೆ ಎಂದು ದೂರಿದ ಅವರು, ರಾಜ್ಯದ ಕಲ್ಯಾಣಕ್ಕಾಗಿ ಹೊಸ ಪಕ್ಷ ಸ್ಥಾಪಿಸಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.