ಕೊಪ್ಪಳ: ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ವಿಧಾನಸಭೆ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಈ ಹಿಂದೆ ಸಿಬಿಐ ತಮ್ಮನ್ನು ಬಂಧಿಸಿದ ರಹಸ್ಯ ಬಿಚ್ಚಿಟ್ಟಿದ್ದಾರೆ. ಸಿಬಿಐ ಮೂಲಕ ಕಾಂಗ್ರೆಸ್ ಸೇರಲು ತಮಗೆ ಆಹ್ವಾನ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಗಂಗಾವತಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಸಿಬಿಐ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದು, ಆದರೆ, ಸುಷ್ಮಾ ಸ್ವರಾಜ್ ಅವರು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಳ್ಳಲು ನನಗೆ ಇಷ್ಟ ಇರಲಿಲ್ಲ. ಹೀಗಾಗಿ ನನ್ನನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರದ ಕಾರಣ ಸಿಬಿಐ ನನ್ನನ್ನು ಬಂಧಿಸಿತ್ತು ಎಂದು ಆರೋಪ ಮಾಡಿದ ಅವರು ವಿಧಾನಸಭೆ ಚುನಾವಣೆ ಹೊತ್ತಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಂಧನದ ದಿನ ಬೆಳಗ್ಗೆ ಮನೆಗೆ ಬಂದ ಸಿಬಿಐ ಅಧಿಕಾರಿಗಳು ನೀವು ಕಾಂಗ್ರೆಸ್ ಸೇರಿದರೆ ನಿಮ್ಮನ್ನು ಬಂಧಿಸುವುದಿಲ್ಲ. ನೀವು ಸುಗಮವಾಗಿ ವ್ಯಾಪಾರ ವ್ಯವಹಾರ ಮಾಡಿಕೊಂಡು ಹೋಗಿ ಎಂದು ಹೇಳಿದ್ದರು. ಆದರೆ, ಸುಷ್ಮಾ ಸ್ವರಾಜ್ ನನ್ನ ಮೇಲೆ ಇಟ್ಟ ನಂಬಿಕೆಯನ್ನು ಹಾಳು ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ನಾನು ಕಾಂಗ್ರೆಸ್ ಗೆ ಹೋಗಲಿಲ್ಲ. ಬಿಜೆಪಿಗೆ ದ್ರೋಹ ಮಾಡಲಿಲ್ಲ. ಹೀಗಾಗಿ ನನ್ನನ್ನು ಬಂಧಿಸಲಾಯಿತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.