ಬೆಂಗಳೂರು: ಕಲ್ಯಾಣ ಕರ್ನಾಟಕ ರಾಜ್ಯ ಪ್ರಗತಿಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿರುವ ಶಾಸಕ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅಸಿಂಧುಗೊಳಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ವಿಲೀನ ಪ್ರಕ್ರಿಯೆ ಸಂವಿಧಾನದ ಶೆಡ್ಯೂಲ್ 10ರ ಪ್ರಕಾರ ನಡೆದಿಲ್ಲ. ಹೀಗಾಗಿ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದಾಖಲೆಗಳ ಸಹಿತ ವಿಧಾನಸಭೆ ಅಧ್ಯಕ್ಷರಿಗೆ ದೂರು ನೀಡಲಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.
ಚುನಾವಣಾ ಆಯೋಗಕ್ಕೆ ಜನಾರ್ದನ ರೆಡ್ಡಿ ನೀಡಿರುವ ಮಾಹಿತಿಯ ಪ್ರಕಾರ ಜನಾರ್ದನ ರೆಡ್ಡಿ ಕಲ್ಯಾಣ ಪ್ರಗತಿ ಪಕ್ಷದ ಪದಾಧಿಕಾರಿಯಲ್ಲ. ಇದು ನೋಂದಾಯಿತ ರಾಜಕೀಯ ಪಕ್ಷವಾಗಿದ್ದು, ಜೆ. ರಾಮಣ್ಣ ಇದರ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಅನೇಕ ಪದಾಧಿಕಾರಿಗಳಿದ್ದಾರೆ. ಆದರೆ, ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿರುವುದಾಗಿ ಹೇಳಿರುವುದು ಪಕ್ಷಾಂತರ ನಿಷೇಧ ಕಾಯ್ದೆಯ ಉಲ್ಲಂಘನೆಯಾಗಿದೆ. ಅವರ ಸದಸ್ಯತ್ವವನ್ನು ಅಸಿಂಧುಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡಲಾಗಿದೆ.