ಬೆಂಗಳೂರು: ರಾಜ್ಯದ ಜನರ ಮನೆಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ‘ಜನಸೇವಕ್’ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ‘ಗ್ರಾಮ ಒನ್’ ಸೇವೆಯನ್ನು ಆರಂಭಿಸಲಾಗಿದೆ.
ಬೆಂಗಳೂರಿನ ದಾಸರಹಳ್ಳಿ, ಬೊಮ್ಮನಹಳ್ಳಿ, ಮಹದೇವಪುರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನಸೇವಕ ಯೋಜನೆ ಜಾರಿಯಲ್ಲಿದ್ದು, ಆಧಾರ್ ಕಾರ್ಡ್ ತಿದ್ದುಪಡಿ, ಇ ಸ್ಟಾಂಪ್ ಸೇವೆ, ಎಪಿಎಲ್ ಕಾರ್ಡ್ ಸೇವೆಗಳನ್ನು ಕೂಡ ಇಂದಿನಿಂದ ಆರಂಭಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ 28 ವಿಧಾನಸಭೆ ಕ್ಷೇತ್ರಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್ ಸೇವೆ ಪ್ರಾಯೋಗಿಕವಾಗಿ ಆರಂಭವಾಗಿದೆ. ಮನೆಬಾಗಿಲಲ್ಲಿಯೇ ಸೇವೆ ಒದಗಿಸಲಾಗುವುದು. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸುವವರಿಗೆ ಇಲಾಖೆಯಿಂದ ಸಾಫ್ಟ್ವೇರ್ ಮತ್ತು ಬ್ರಾಂಡ್ ನೀಡಲಾಗುತ್ತದೆ. ಸುಮಾರು 750 ಕ್ಕೂ ಹೆಚ್ಚು ನಾಗರಿಕ ಸೇವೆಗಳಿಗೆ ಈ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ.
ಜಾತಿ ದೃಢೀಕರಣ ಪತ್ರ, ಆದಾಯ ಪ್ರಮಾಣ ಮೊದಲಾದ ಸೇವೆ, ಸಾಮಾಜಿಕ ಭದ್ರತೆ ಯೋಜನೆಗಳ ನೆರವು ಪಡೆಯಬಹುದು. ಜನಸೇವಕ ಯೋಜನೆಗೆ 115 ರೂ. ಶುಲ್ಕ ನಿಗದಿಪಡಿಸಲಾಗಿದೆ ಎನ್ನಲಾಗಿದೆ.