ಜಮ್ ಶೆಡ್ ಪುರ: ತನ್ನ ಪ್ರಿಯಕರನೊಂದಿಗೆ ಓಡಿಹೋಗಿ ಮದುವೆಯಾಗುವುದನ್ನು ತಡೆದ ಕಾರಣಕ್ಕೆ 15 ವರ್ಷದ ಬಾಲಕಿಯೊಬ್ಬಳು 37 ವರ್ಷದ ಗೆಳೆಯನೊಂದಿಗೆ ಸೇರಿಕೊಂಡು ಪೋಷಕರ ಮೇಲೆ ಸುತ್ತಿಗೆ ಮತ್ತು ಪ್ರೆಶರ್ ಕುಕ್ಕರ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಜಾರ್ಖಂಡ್ ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ತಡರಾತ್ರಿ ಟೆಲ್ಕೊ ಪೊಲೀಸ್ ಠಾಣೆ ವ್ಯಾಪ್ತಿಯ ಮ್ಯಾನಿಫಿಟ್‌ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ದಂಪತಿಯ ಶವವನ್ನು ಅವರ ಮನೆಯಲ್ಲಿ ರಕ್ತದ ಮಡುವಿನಲ್ಲಿ ಅವರ ನೆರೆಹೊರೆಯವರು ನೋಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ(ನಗರ) ಕೆ. ವಿಜಯ್ ಶಂಕರ್ ಮಾತನಾಡಿ, ಪೊಲೀಸರು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಭೇದಿಸಿದ್ದಾರೆ. ಹದಿಹರೆಯದ ಹುಡುಗಿ ಮತ್ತು ಆಕೆಯ ಗೆಳೆಯನನ್ನು ಮಂಗಳವಾರ ಬೆಳಿಗ್ಗೆ ಬಿರ್ಸಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಓಂನಗರದಲ್ಲಿರುವ ಬಾಡಿಗೆ ಮನೆಯಿಂದ ಬಂಧಿಸಲಾಯಿತು ಎಂದು ಹೇಳಿದರು.
ಭಾನುವಾರ ರಾತ್ರಿ ಬಾಲಕಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಮನೆಯಿಂದ ಓಡಿಹೋಗಲು ಮುಂದಾದಾಗ, ಆಕೆಯ ಪೋಷಕರು ಎಚ್ಚರಗೊಂಡರು. ಆಕೆಯ ತಂದೆ(42) ಮತ್ತು ತಾಯಿ(35) ಅವರನ್ನು ಹೋಗದಂತೆ ತಡೆದರು. ನಂತರ, ಆರೋಪಿಗಳಿಬ್ಬರು ಸುತ್ತಿಗೆ ಮತ್ತು ಪ್ರೆಶರ್ ಕುಕ್ಕರ್ ನಿಂದ ಥಳಿಸಿ ಸಾವಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಂತರ ಬಾಲಕಿ ತನ್ನ ಬಾಯ್ ಫ್ರೆಂಡ್ ಜೊತೆ ಆತನ ಸ್ಕೂಟರ್ ನಲ್ಲಿ ಪರಾರಿಯಾಗಿ ಆತನ ಬಾಡಿಗೆ ಮನೆಗೆ ಹೋಗಿದ್ದಾಳೆ. ಸುತ್ತಿಗೆ, ರಕ್ತಸಿಕ್ತ ಪ್ರೆಶರ್ ಕುಕ್ಕರ್, ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆ ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಹುಡುಗಿ ಮತ್ತು ಅವನ ಗೆಳೆಯನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯ ಮುಖ್ಯ ಗೇಟ್ ಹೊರಗಿನಿಂದ ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ಆವರಣದೊಳಗೆ ಪ್ರವೇಶಿಸಿ ಸೋಮವಾರ ಬೆಳಿಗ್ಗೆ ರಕ್ತದ ಮಡುವಿನಲ್ಲಿ ದಂಪತಿಗಳ ಶವಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.