
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವೆಯಾನ್ ಗ್ರಾಮ ಸಾಧನೆ ಮಾಡಿದೆ. ಇಲ್ಲಿನ ಎಲ್ಲಾ ವಯಸ್ಕರಿಗೆ ಕೋವಿಡ್ -19 ಲಸಿಕೆ ನೀಡಿದ ದೇಶದ ಮೊದಲ ಗ್ರಾಮವಾಗಿದೆ. ಅಧಿಕಾರಿಗಳು ಮಂಗಳವಾರ ಈ ಮಾಹಿತಿಯನ್ನು ನೀಡಿದ್ದಾರೆ. ವಯಾನ್ ಗ್ರಾಮದಲ್ಲಿ ಒಟ್ಟು 362 ವಯಸ್ಕರಿದ್ದಾರೆ.
ಎಲ್ಲರಿಗೂ ಲಸಿಕೆ ಹಾಕಿದ ಶ್ರೇಯಸ್ಸು ಆರೋಗ್ಯ ಕಾರ್ಯಕರ್ತರಿಗೆ ಸಲ್ಲುತ್ತದೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ ಗ್ರಾಮವು ದೇಶಾದ್ಯಂತ ಚರ್ಚೆಯ ಕೇಂದ್ರವಾಗಿದೆ. ವಯನ್ ಗ್ರಾಮವು ಬಂಡಿಪೋರಾ ಜಿಲ್ಲಾ ಕೇಂದ್ರದಿಂದ ಕೇವಲ 28 ಕಿ.ಮೀ ದೂರದಲ್ಲಿದೆ. ಆದರೆ ಆರೋಗ್ಯ ಕಾರ್ಯಕರ್ತರು ಅಲ್ಲಿಗೆ ತಲುಪಲು ಸುಮಾರು 18 ಕಿ.ಮೀ ನಡೆದು ಹೋಗಬೇಕು.
ಈ ಗ್ರಾಮದಲ್ಲಿ ಅಲೆಮಾರಿಗಳ ಸಂಖ್ಯೆ ಹೆಚ್ಚಿದೆ. ಅವರು ಪ್ರಾಣಿಗಳನ್ನು ಕಾಯಲು ಹೊರಗೆ ಹೋಗುವುದ್ರಿಂದ ಅವರು ಬರುವವರೆಗೂ ಕಾಯುವುದು ಸವಾಲಿನ ಕೆಲಸವಾಗಿತ್ತೆಂದು ಆರೋಗ್ಯ ಕಾರ್ಯಕರ್ತರು ಹೇಳಿದ್ದಾರೆ. ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಬಂಡಿಪೋರಾ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಬಶೀರ್ ಅಹ್ಮದ್ ಖಾನ್, ಗ್ರಾಮದಲ್ಲಿ ಯಾವುದೇ ಇಂಟರ್ನೆಟ್ ಸೌಲಭ್ಯವಿಲ್ಲ. ಆದ್ದರಿಂದ ಅಲ್ಲಿ ವಾಸಿಸುವ ಜನರು ಲಸಿಕೆಗಾಗಿ ನಗರಗಳಿಗೆ ಹೋಗಬೇಕು. ಆದ್ರೆ ಆನ್ಲೈನ್ ನೋಂದಣಿಯಿರುವ ಕಾರಣ ನೋಂದಣಿ ಸಾಧ್ಯವಾಗ್ತಿಲ್ಲವೆಂದು ಅವರು ಹೇಳಿದ್ದಾರೆ.