ನವದೆಹಲಿ: ಹೊಸದಾಗಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ರೈಲು ಸೇತುವೆಯ ಪ್ರಾಯೋಗಿಕ ಚಾಲನೆಯನ್ನು ಭಾರತೀಯ ರೈಲ್ವೇ ಇಂದು ಯಶಸ್ವಿಯಾಗಿ ನಡೆಸಿತು. ಈ ಸೇತುವೆಯನ್ನು ರಾಂಬನ್ ಜಿಲ್ಲೆಯ ಸಂಗಲ್ದನ್ ಮತ್ತು ರಿಯಾಸಿ ನಡುವೆ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ, ಜಮ್ಮು ಮತ್ತು ಕಾಶ್ಮೀರ USBRL ಯೋಜನೆಯ ಸಂಗಲ್ಡನ್-ರಿಯಾಸಿ ವಿಭಾಗದ ನಡುವೆ MEMU ರೈಲಿನ ಯಶಸ್ವಿ ಪ್ರಾಯೋಗಿಕ ಚಾಲನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ, ರೈಲುಗಳು ಕನ್ಯಾಕುಮಾರಿಯಿಂದ ಕತ್ರಾವರೆಗಿನ ರೈಲು ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತವೆ. ಈಗ ಕಾಶ್ಮೀರ ಕಣಿವೆಯ ಬಾರಾಮುಲ್ಲಾದಿಂದ ಸಂಗಲ್ದನ್ ಗೆ ಸೇವೆ ವಿಸ್ತರಣೆಯಾಗಲಿದೆ. ಉಧಮ್ ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ(USBRL) ಯೋಜನೆಯು ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಚೆನಾಬ್ ನದಿಯ ಮೇಲೆ 359 ಮೀಟರ್(ಸುಮಾರು 109 ಅಡಿ) ನಿರ್ಮಿಸಲಾದ ಚೆನಾಬ್ ರೈಲು ಸೇತುವೆಯು ಐಫೆಲ್ ಟವರ್‌ಗಿಂತ ಸುಮಾರು 35 ಮೀಟರ್ ಎತ್ತರವಾಗಿದೆ. 1,315 ಮೀಟರ್ ಉದ್ದದ ಸೇತುವೆಯು ವಿಶಾಲವಾದ USBRL ಯೋಜನೆಯ ಭಾಗವಾಗಿದೆ.