ಬೆಳಗಾವಿ: ಜಮ್ಮು-ಕಾಶ್ಮೀರದ ಪೂಂಛ್ ನಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದು, ಂಉವರ ಪಾರ್ಥಿವಶರೀರ ರಾಜ್ಯಕ್ಕೆ ಆಗಮಿಸಿದೆ. ಇಂದು ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಬೆಳಗಾವಿ ಹಾಗೂ ಮಹಾಲಿಂಗಪುರದ ಇಬ್ಬರು ಯೋಧರಾದ ದಯಾನಂದ ತಿರುವಣ್ಣವರ್ ಹಾಗೂ ಮಹೇಶ್ ಮಾರಿಗೊಂಡ ಅವರ ಅಂತ್ಯಕ್ರಿಯೆ ಬೆಳಗಾವಿಯಲ್ಲಿ ನಡೆಯಲಿದೆ. ಯೋಧ ಅನೂಪ್ ಅವರ ಅಂತ್ಯಕ್ರಿಯೆ ಉಡುಪಿಯ ಕುಂದಾಪುರದ ಅವರ ಹುಟ್ಟೂರಿನಲ್ಲಿ ನಡೆಯಲಿದೆ.
ಬೆಳಗಾವಿಯಲ್ಲಿ ಇಂದಿನಿಂದ ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿಯ ಮರಾಠಾ ರೆಜಿಮೆಂಟ್ ಗೆ ಆಗಮಿಸಿ, ಇಬ್ಬರು ಹುತಾತ್ಮ ಯೋಧರ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸೇನಾವಾಹನ ಅಪಘಾತದಲಿ ಪೂಂಛ್ ಜಿಲ್ಲೆಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ. ಅವರಲ್ಲಿ ಕರ್ನಾಟಕದ ಮೂವರು ಯೋಧರು ಸೇರಿದ್ದಾರೆ. ದೇಶಕ್ಕಾಗಿ, ದೇಶದ ಭದ್ರತೆಗಾಗಿ ಶ್ರಮಿಸುವ ಯೋಧರ ದುರಂತ ಸಾವು ದು:ಖತಂದಿದೆ. ಕುಟುಂಬದವರಿಗೆ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದೇನೆ. ಇನ್ನು ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಒಟ್ಟು ಐವರು ಯೋಧರು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಯೋಧರು ಕರ್ನಾಟಕದವರಾಗಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿಯ ಸಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ್ (45), ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ಕೋಟೇಶ್ವರದ ಬಿಜಾಡಿಯ ಅನೂಪ್ (33) ಮಹಾಲಿಂಗಪುರದ ಮಹೇಶ್ ಮರಿಗೊಂಡ (25) ಮೃತರು.