ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ ಹಲವು ಕಡೆ ಪ್ರವಾಹ ಸೃಷ್ಟಿಯಾಗಿದೆ. ರಾಂಬನ್ ಜಿಲ್ಲೆಯ ಹಲವೆಡೆ ಪ್ರವಾಹದಿಂದಾಗಿ ಗುಡ್ಡಗಳು ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ. ರಾಂಬನ್ ಜಿಲ್ಲೆಯಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ 48 ಗಂಟೆಗಳಲ್ಲಿ ನಿರಂತರ ಮಳೆಯು ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ವಿಶೇಷವಾಗಿ ಪೂಂಚ್ ನಲ್ಲಿ ಹೆಚ್ಚಿನ ಹಾನಿಯನ್ನುಂಟುಮಾಡಿದೆ. ಪೂಂಚ್‌ನ ಮಂಡಿ ಪ್ರದೇಶದಲ್ಲಿ ಬೀದರ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಭೂಕುಸಿತ ಉಂಟಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಮಳೆಯು ಪೂಂಚ್ ಮತ್ತು ಉತ್ತರ ಕಾಶ್ಮೀರದ ಭಾಗಗಳಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾಯಿತು, ಇದರ ಪರಿಣಾಮವಾಗಿ 8 ರಿಂದ 10 ಕಟ್ಟಡಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದೆ.
ಎಸ್‌ಡಿಎಂ ಅಶ್ಫಾಕ್ ಹುಸೇನ್ ಘಟನೆಯ ವಿವರಗಳನ್ನು ಒದಗಿಸಿದ್ದು, ಭಾರಿ ಮಳೆಯಿಂದಾಗಿ 8 ರಿಂದ 10 ಮನೆಗಳಿಗೆ ಹಾನಿಯಾಗಿದೆ, ಕೆಲವು ಸಂಪೂರ್ಣವಾಗಿ ನಾಶವಾಗಿದ್ದು, ಕೆಲವು ಭಾಗಶಃ ಹಾನಿಯಾಗಿದೆ. ರಸ್ತೆಗಳು ಕೂಡ ಹಾನಿಗೊಳಗಾದವು ಎಂದು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ಮಧ್ಯ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್‌ನ ಸರ್ಬಲ್ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ. ಅದೃಷ್ಟವಶಾತ್, ಸೋನಾಮಾರ್ಗ್ ಅರಣ್ಯ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಆರ್ಥಿಕ ನಷ್ಟ ಸಂಭವಿಸಿಲ್ಲ.