ಶ್ರೀನಗರ: ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ನೊಂದಿಗೆ ಸಂಪರ್ಕ ಹೊಂದಿರುವ ಇಬ್ಬರು ಭಯೋತ್ಪಾದಕರನ್ನು ಶ್ರೀನಗರ ಪೊಲೀಸರು ಶನಿವಾರ ಬೆಳಿಗ್ಗೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ.
ಶ್ರೀನಗರ ನಗರದ ಜಕುರಾ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸಲಾಗಿದೆ ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.
ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಇಖ್ಲಾಕ್ ಹಜಾಮ್ ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಅನಂತ್ ನಾಗ್ ನ ಹಾಸನ್ ಪೋರಾದಲ್ಲಿ ಹೆಡ್ ಕಾನ್ ಸ್ಟೆಬಲ್ ಅಲಿ ಮೊಹಮ್ಮದ್ ಗನಿಯ ಹತ್ಯೆಯಲ್ಲೂ ಭಾಗಿಯಾಗಿದ್ದ ಎಂದು ಐಜಿಪಿ ಹೇಳಿದ್ದಾರೆ.
ಶ್ರೀನಗರ ಪೊಲೀಸರು ಎಲ್‌ಇಟಿ/ಟಿಆರ್‌ಎಫ್‌ನ ಇಬ್ಬರು ಭಯೋತ್ಪಾದಕರನ್ನು ತಟಸ್ಥಗೊಳಿಸಿದ್ದಾರೆ. ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬನಾದ ಇಖ್ಲಾಕ್ ಹಜಾಮ್, ಇತ್ತೀಚೆಗೆ ಹಾಸನ್‌ಪೋರಾ ಅನಂತನಾಗ್ ನಲ್ಲಿ ಹೆಚ್.ಸಿ. ಅಲಿ ಮೊಹಮದ್ ಹತ್ಯೆಯಲ್ಲಿ ಭಾಗಿಯಾಗಿದ್ದ. 2 ಪಿಸ್ತೂಲ್‌ಗಳು ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಐಜಿಪಿ ಟ್ವೀಟ್ ಮಾಡಿದ್ದಾರೆ.
ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದ ಗನಿಯನ್ನು ಜನವರಿ 29 ರಂದು ಹಾಸನ್ ಪೋರಾದಲ್ಲಿ ಶಂಕಿತ ಉಗ್ರಗಾಮಿಗಳು ಗುಂಡಿಕ್ಕಿ ಕೊಂದರು. ಅನಂತನಾಗ್‌ನ ಬಿಜ್ ಬೆಹರಾದ ತಬಲಾ ಪ್ರದೇಶದ ಅವರ ನಿವಾಸದ ಬಳಿ ಬಂದೂಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಾರ್ಗಮಧ್ಯೆ ಮೃತಪಟ್ಟಿದ್ದರು.