ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಎನ್ ಕೌಂಟರ್ ನಡೆಸಲಾಗಿದೆ. ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ ಉಗ್ರನೊಬ್ಬನನ್ನು ಹೊಡೆದುರುಳಿಸಿದೆ.
ಉಗ್ರನ ಬಳಿ ಇದ್ದ ಒಂದು ಪಿಸ್ತೂಲ್, ಲೋಡೆಡ್ ಮ್ಯಾಗ್ ಜೀನ್, ಒಂದು ಪಾಕ್ ಗ್ರೆನೇಡ್ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಇನ್ನೂ ಹಲವು ಭಯೋತ್ಪಾದಕರು ಅವಿತಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶೋಧಕಾರ್ಯ ಚುರುಕುಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚಿನ ಯೋಧರನ್ನು ರವಾನಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ನಂತರ ಭಯೋತ್ಪಾದಕರ ಸದೆಬಡಿಯಲು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
ಇಂದು ಎನ್ ಕೌಂಟರ್ ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕ ಹೈಬ್ರಿಡ್ ಮಾದರಿಯವನಾಗಿದ್ದು, ಕುಲ್ಗಾಮ್ ಜಿಲ್ಲೆಯ ಜಾವೇದ್ ಅಹ್ ವಾನಿ ಎಂದು ಗುರುತಿಸಲಾಗಿದೆ. ಆತ ವಾನ್ಪೋಹ್‌ನಲ್ಲಿ ಬಿಹಾರದ 2 ಕಾರ್ಮಿಕರನ್ನು ಕೊಲ್ಲಲು ಭಯೋತ್ಪಾದಕ ಗುಲ್ಜಾರ್(ಅಕ್ಟೋಬರ್ 20 ರಂದು ಕೊಲ್ಲಲ್ಪಟ್ಟನು)ಗೆ ಸಹಾಯ ಮಾಡಿದ್ದಾನೆ. ಬಾರಾಮುಲ್ಲಾದಲ್ಲಿ ಅಂಗಡಿ ಮಾಲೀಕನ ಹತ್ಯೆಗೆ ಸಂಚು ರೂಪಿಸಿ ಗುರಿಯಾಗಿಸುವ ಕಾರ್ಯಾಚರಣೆಯಲ್ಲಿದ್ದರು ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.