ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಬಾಜಿ ಮಾಲ್ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಸೇರಿ ಇಬ್ಬರು ಸೇನಾ ಸಿಬ್ಬಂದಿ ಹತರಾಗಿದ್ದಾರೆ.
ಒಬ್ಬ ಭಯೋತ್ಪಾದಕ ಮೃತಪಟ್ಟಿದ್ದು, ಮತ್ತೊಬ್ಬ ಭಯೋತ್ಪಾದಕ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಜೌರಿಯ ಬಾಜಿ ಮಾಲ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳ ತಂಡವು ಶೋಧ ಕಾರ್ಯಾಚರಣೆಯಲ್ಲಿದ್ದಾಗ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ಆರಂಭವಾಗಿದೆ.
ಜಮ್ಮು ವಿಭಾಗದ ರಜೌರಿ ಜಿಲ್ಲೆಯ ಕಲಾಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಜಿ ಗ್ರಾಮದ ಕಾಡುಗಳಲ್ಲಿ 2 ರಿಂದ 3 ಭಯೋತ್ಪಾದಕರು ಅಡಗಿರುವ ಸಾಧ್ಯತೆಯಿದೆ ಎಂದು ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತು. ಮಾಹಿತಿಯ ಆಧಾರದ ಮೇಲೆ, ಹೆಚ್ಚುವರಿ ಭಾರತೀಯ ಸೇನೆಯ ಜಮ್ಮು ಕಾಶ್ಮೀರ ಪೊಲೀಸ್ SOG ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಹುಡುಕಾಟದ ಸಮಯದಲ್ಲಿ, ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು, ನಂತರ ಆ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಡ್ರೋನ್ ಮತ್ತು ಹೆಲಿಕಾಪ್ಟರ್‌ಗಳ ಸಹಾಯದಿಂದ ಈ ಪ್ರದೇಶದಲ್ಲಿ ಭಯೋತ್ಪಾದಕರ ಮೇಲೆ ಕಣ್ಣಿಟ್ಟಿವೆ. ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ.