ಟೋಕಿ ಒಲಿಂಪಿಕ್ಸ್‌ನ ಪುರುಷರ 110 ಮೀಟರ್ ಹರ್ಡಲ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದ ಜಮೈಕಾದ ಅಥ್ಲೀಟ್ ಹಾಂಸ್ಲೇ ಪಾರ್ಚ್ಮೆಂಟ್ ಈ ಇವೆಂಟ್ ನಡೆಯಲಿದ್ದ ಜಾಗದ ಬದಲು ಅಚಾನಕ್ಕಾಗಿ ಬೇರೆಲ್ಲೋ ಹೋಗಿದ್ದರು ಎಂದು ಬಹುತೇಕರಿಗೆ ಗೊತ್ತಿಲ್ಲ.
ಫೈನಲ್ ಸುತ್ತಿನ ಓಟ ನಡೆಯುವ ಜಾಗದ ಬದಲು ಬೇರೆಲ್ಲೋ ಹೋಗಿದ್ದ ಪಾರ್ಚ್ಮೆಂಟ್ ಓಟಕ್ಕೆ ಗೈರಾಗುವ ಸಾಧ್ಯತೆ ಇತ್ತು. ಆದರೆ ಈ ವೇಳೆ ಅವರ ನೆರವಿಗೆ ಬಂದ ಸ್ವಯಂಸೇವಕರೊಬ್ಬರು ಪಾರ್ಚ್ಮೆಂಟ್‌ಗೆ ಹಣ ಕೊಟ್ಟು ಟ್ಯಾಕ್ಸಿ ಪಡೆದು ಸರಿಯಾದ ಜಾಗ ತಲುಪಲು ನೆರವಾಗಿದ್ದಾರೆ. ಓಟ ಶುರುವಾಗುವ ಸರಿಯಾದ ಸಮಯಕ್ಕೆ ಸ್ಥಳ ತಲುಪಿದ ಪಾರ್ಚ್ಮೆಂಟ್ ಚಿನ್ನದ ಪದಕ ಗೆದ್ದಿದ್ದಾರೆ.
“ಸೆಮಿಫೈನಲ್ ಪಂದ್ಯದ ವೇಳೆ ತಪ್ಪಾದ ಬಸ್ ಏರಿದ್ದ ನಾನು ತಪ್ಪಾದ ಜಾಗಕ್ಕೆ ತಲುಪಿದ್ದೆ. ಕಿವಿಗೆ ಇಯರ್‌ಫೋನ್ ಹಾಕಿಕೊಂಡಿದ್ದ ನನಗೆ ಬಸ್ಸಲ್ಲಿದ್ದ ಜನರು ಏನು ಹೇಳುತ್ತಿದ್ದಾರೆ ಎಂದು ಕೇಳಿಸುತ್ತಲೇ ಇರಲಿಲ್ಲ. ಅಥ್ಲೆಟಿಕ್ಸ್ ಟ್ರ‍್ಯಾಕ್ ಎಂದು ಬಸ್ಸಿನ ಸಹಿಬೋರ್ಡ್‌ನಲ್ಲಿ ಬರೆದಿದ್ದನ್ನು ಮಾತ್ರವೇ ನೋಡಿದ್ದೆ. ಹಾಗಾಗಿ ಬೇರೇನೋ ಚಿಂತಿಸದೇ ನಾನು ಸುಮ್ಮನೇ ಹೊರಟುಬಿಟ್ಟೆ. ಈ ವೇಳೆ ನನ್ನ ಫೋನಿನಲ್ಲಿ ಸಂಗೀತ ಆಲಿಸುತ್ತಿದ್ದೆ. ಏನಾಗುತ್ತಿದೆ ಎಂದು ನನಗೆ ಅರಿವಾಗುವಷ್ಟರಲ್ಲಿ ಬಸ್ಸು ತಪ್ಪಾದ ದಾರಿಯಲ್ಲಿ ಹೋಗುತ್ತಿತ್ತು. ಈ ಜಾಗ ನನಗೆ ಪರಿಚಿತವೂ ಅಲ್ಲ” ಎಂದು ಖುದ್ದು ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ ಪಾರ್ಚ್ಮೆಂಟ್.
“ಬಸ್ಸಿನಿಂದ ಇಳಿದ ಜಾಗದಲ್ಲಿ ರೋಯಿಂಗ್‌ನಂಥ ಆಟ ನಡೆಯುತ್ತಿತ್ತು. ಮತ್ತೆ ಕ್ರೀಡಾ ಗ್ರಾಮಕ್ಕೆ ಬಂದು ಬೇರೊಂದು ಬಸ್ ಏರಿ ಅಥ್ಲೆಟಿಕ್ಸ್ ಕ್ರೀಡಾಂಗಣಕ್ಕೆ ಹೋಗಬೇಕೆಂದು ನನಗೆ ಹೇಳಲಾಯಿತು. ನಾನು ಹಾಗೆಯೇ ಮಾಡಿದ್ದರೆ ಸರಿಯಾದ ಸಮಯದಲ್ಲಿ ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ.
ಕಾರೊಂದರಲ್ಲಿ ಸ್ಥಳ ತಲುಪಲು ನಾನು ನೋಡಿದೆ. ಆದರೆ ಈ ಮಂದಿ ಬಹಳ ಸ್ಟ್ರಿಕ್ಟ್. ಆಗ ನನ್ನ ನೆರವಿಗೆ ಬಂದ ಈ ಸ್ವಯಂ ಸೇವಕಿ ನನಗೆ ಸ್ವಲ್ಪ ದುಡ್ಡು ಕೊಟ್ಟು ಟ್ಯಾಕ್ಸಿ ಪಡೆಯಲು ನೆರವಾದಳು. ಹೀಗಾಗಿ ನನಗೆ ಕ್ರೀಡಾಂಗಣದಲ್ಲಿ ವಾರ್ಮ್-ಅಪ್ ಮಾಡಲು ಸಾಕಷ್ಟು ಕಾಲಾವಕಾಶ ಸಿಕ್ಕಿತು. ನಾನು ಈಗ ಆಕೆಯನ್ನು ಪತ್ತೆ ಮಾಡಿ ನನ್ನ ಚಿನ್ನದ ಪದಕ ತೋರಲು ಹೋಗಲಿದ್ದೇನೆ ಏಕೆಂದರೆ ಆಕೆಯ ಸಹಾಯದಿಂದಲೇ ನನಗೆ ಚಿನ್ನದ ಪದಕ ಸಿಕ್ಕಿದೆ” ಎಂದು ಪಾರ್ಚ್ಮೆಂಟ್ ತಿಳಿಸಿದ್ದಾರೆ.
https://www.youtube.com/watch?v=YvwfW_mGoAg