ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಂಡಮಾರುತದ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಕನಿಷ್ಠ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇಬ್ಬರು ಗಂಭೀರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಚಂಡಮಾರುತದಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ನಾಗರಿಕ ಆಡಳಿತ, ಪೊಲೀಸ್ ಮತ್ತು ವಿಪತ್ತು ನಿರ್ವಹಣೆಯ ಸಿಬ್ಬಂದಿಯನ್ನು ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಜಲ್ಪೈಗುರಿ-ಮೇನಾಗುರಿ ಪ್ರದೇಶಗಳಲ್ಲಿ ಹಠಾತ್ ಭಾರೀ ಮಳೆ ಮತ್ತು ಬಿರುಗಾಳಿಯು ವಿಪತ್ತುಗಳಿಗೆ ಕಾರಣವಾಗಿದೆ. ಮಾನವ ಜೀವಹಾನಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಮನೆಗಳಿಗೆ ಹಾನಿಯಾಗಿದೆ. ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ ಎಂದು ತಿಳಿಸಿದ್ದಾರೆ.
5 ಮಂದಿ ಬಲಿ, 100ಕ್ಕೂ ಹೆಚ್ಚು ಮಂದಿ ಗಾಯ
ಉತ್ತರ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾನುವಾರ “ಹಠಾತ್” ಚಂಡಮಾರುತವು ವಿನಾಶವನ್ನು ಉಂಟುಮಾಡಿದ್ದರಿಂದ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತರನ್ನು ದಿಜೇಂದ್ರ ನಾರಾಯಣ ಸರ್ಕಾರ್(52), ಅನಿಮಾ ಬರ್ಮನ್(45), ಜಾಗನ್ ರಾಯ್(72) ಮತ್ತು ಸಮರ್ ರಾಯ್(64) ಎಂದು ಗುರುತಿಸಲಾಗಿದೆ. ಹಲವು ಪಾದಚಾರಿಗಳು ಆಲಿಕಲ್ಲು ಮಳೆಯಿಂದ ಗಾಯಗೊಂಡಿದ್ದಾರೆ. ವಿಪತ್ತು ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಾಗಿದೆ ಮತ್ತು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಲ್ಪೈಗುರಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಧುಪ್ಗುರಿ ಶಾಸಕ ನಿರ್ಮಲ್ ಚಂದ್ರ ರಾಯ್ ಹೇಳಿದ್ದಾರೆ. ಜಲ್ಪೈಗುರಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ರಾಜಭವನದಲ್ಲಿ ತುರ್ತು ಸಹಾಯವಾಣಿ ಸಹ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಪಟ್ಟಣದ ಹೆಚ್ಚಿನ ಭಾಗಗಳು ಮತ್ತು ನೆರೆಯ ಮೈನಾಗೂರಿನ ಹಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೊಂದಿಗೆ ಬಲವಾದ ಗಾಳಿ ಬೀಸಿದ್ದರಿಂದ ಹಲವಾರು ಗುಡಿಸಲುಗಳು ಮತ್ತು ಮನೆಗಳು ಹಾನಿಗೊಳಗಾಗಿವೆ, ಮರಗಳು ಬೇರುಸಹಿತ ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಾಜರಹತ್, ಬರ್ನಿಶ್, ಬಕಾಲಿ, ಜೋರ್ಪಕ್ಡಿ, ಮಧಬ್ದಂಗ ಮತ್ತು ಸಪ್ತಿಬರಿ ಸೇರಿವೆ. ಹಲವಾರು ಎಕರೆ ಕೃಷಿ ಭೂಮಿ ಮತ್ತು ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಚಂಡಮಾರುತದಲ್ಲಿ ಸಂಭವಿಸಿದ ಜೀವಹಾನಿಗಳಿಗೆ ಸಂತಾಪ ಸೂಚಿಸಿದ್ದಾರೆ ಪಶ್ಚಿಮ ಬಂಗಾಳದ ಜಲ್ಪೈಗುರಿ-ಮೈನಾಗುರಿ ಪ್ರದೇಶಗಳಲ್ಲಿ ಚಂಡಮಾರುತದಿಂದ ಸಂತ್ರಸ್ತರಾದವರ ಜೊತೆಗೆ ನಾವಿದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು ಎಂದು ಮೋದಿ ಎಕ್ಸ್ ನಲ್ಲಿ ಹೇಳಿದ್ದಾರೆ.
ಸಂತ್ರಸ್ತರಿಗೆ ಸಹಾಯ ಮಾಡುವಂತೆ ನಾನು ಎಲ್ಲಾ ಬಂಗಾಳ ಬಿಜೆಪಿ ಕಾರ್ಯಕರ್ತರನ್ನು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.