ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದು ರಾಜ್ಯ ಸರ್ಕಾರದ ಪ್ರಮುಖ ಗುರಿ. ಇದಕ್ಕಾಗಿಯೇ ಜಲ ಜೀವನ್ ಮಿಷನ್ ಎಂಬ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಡಿಯಲ್ಲಿ ರಾಜ್ಯದಲ್ಲಿ ಸುಮಾರು 1.01 ಕೋಟಿ ಕುಟುಂಬಗಳಿಗೆ ಟ್ಯಾಪ್ ನೀರಿನ ಸಂಪರ್ಕದ ಅಗತ್ಯ ಇದೆ ಎಂಬುದನ್ನು ಸರ್ಕಾರ ಮನಗಂಡಿದೆ.
ಈವರೆಗೆ ಸುಮಾರು 55.66 ಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಸರ್ಕಾರ ಒದಗಿಸಿದೆ. ವಿಪರ್ಯಾಸ ಅಂದ್ರೆ ಕರ್ನಾಟಕದಲ್ಲಿ ಈ ಯೋಜನೆ ಜಾರಿಗೂ ಮುನ್ನ ಕೇವಲ 25 ಲಕ್ಷ ಕುಟುಂಬಗಳು ಮಾತ್ರ ಟ್ಯಾಪ್ ವಾಟರ್ ಸಂಪರ್ಕವನ್ನು ಹೊಂದಿದ್ದವು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಸರ್ಕಾರ ಇನ್ನೂ 68 ಲಕ್ಷ ನಲ್ಲಿ ಸಂಪರ್ಕಗಳನ್ನು ಒದಗಿಸಬೇಕಾಗಿದೆ. ಮೋದಿ ಆಡಳಿತದ ಪ್ರಮುಖ ಯೋಜನೆಯಾದ ಜೆಜೆಎಂ ಅನ್ನು ಚುನಾವಣಾ ವರ್ಷದಲ್ಲಿ ಜಾರಿಗೆ ತರಲು ರಾಜ್ಯ ಸರ್ಕಾರ ಪ್ಲಾನ್ ಹಾಕಿಕೊಂಡಿದೆ.
ಈ ಆರ್ಥಿಕ ವರ್ಷದಲ್ಲಿ ಜಲ ಜೀವನ್ ಯೋಜನೆಗೆ 7000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ಮನೆಗೆ ಕ್ರಿಯಾತ್ಮಕವಾಗಿರುವ ನಲ್ಲಿ ಸಂಪರ್ಕ ನೀಡಲಾಗುವುದು. ದಿನಕ್ಕೆ ಕನಿಷ್ಠ 55 ಲೀಟರ್ ಕುಡಿಯುವ ನೀರನ್ನು ಅದು ಒದಗಿಸುತ್ತದೆ. 2024ರ ವೇಳೆಗೆ ಸರ್ಕಾರ ಎಲ್ಲಾ ಗ್ರಾಮೀಣ ಭಾಗದ 1.01 ಕೋಟಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆಗೆ ಸಂಪುಟದ ಒಪ್ಪಿಗೆಯನ್ನೇ ಇಲಾಖೆ ನಿರೀಕ್ಷಿಸುತ್ತಿದೆ.