ಅಲ್ಲಿ ನೋಟಿನ ಮಳೆ ಸುರಿದಿತ್ತು. ರಸ್ತೆಯಲ್ಲಿ ಬೀಳುತ್ತಿದ್ದ ನೋಟುಗಳನ್ನ ಹಿಡಿಯಲು ಜನ ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ರು . ರಾಜಸ್ತಾನದ ಜೈಪುರದ ಬೀದಿಯೊಂದು ಈ ಘಟನೆಗೆ ಸಾಕ್ಷಿಯಾಗಿತ್ತು.
ಜೈಪುರದ ಬೀದಿಗಳಲ್ಲಿ ಜನಪ್ರಿಯ ವೆಬ್ ಸರಣಿ ‘ಮನಿ ಹೀಸ್ಟ್’ ಅನ್ನು ನೆನಪಿಸುವ ದೃಶ್ಯವು ಕಾಣಿಸಿಕೊಂಡಿತ್ತು. ವ್ಯಕ್ತಿಯೊಬ್ಬ ಕಾರಿನ ಮೇಲೆ ನಿಂತು ಸಾರ್ವಜನಿಕರ ಮೇಲೆ ಕರೆನ್ಸಿ ನೋಟುಗಳನ್ನು ಸುರಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
40 ಸೆಕೆಂಡ್‌ಗಳ ವಿಡಿಯೋದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿದ್ದ ಅಪರಿಚಿತ ವ್ಯಕ್ತಿಯು ಗಾಳಿಯಲ್ಲಿ ಹಣವನ್ನು ಎಸೆಯುತ್ತಿದ್ದ. ಆತನನ್ನು ಕುತೂಹಲದಿಂದ ನೋಡುತ್ತಾ ನಿಂತಿದ್ದ ಜನ ನೋಟುಗಳನ್ನು ಹಿಡಿದುಕೊಳ್ಳಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದರು. ಇದರಿಂದ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದೀಗ ಪೊಲೀಸರು ನೋಟಿನ ಮಳೆಗರೆದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.