ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿನ ದಾಳಿ ನಡೆಸಿ, ಹಿರಿಯ ಅಧಿಕಾರಿ ಸೇರಿ ನಾಲ್ವರನ್ನು ಹತ್ಯೆ ಮಾಡಿದ್ದ ರೈಲ್ವೆ ರಕ್ಷಣಾ ಪಡೆಯ ಕಾನ್ಸ್ ಟೇಬಲ್ ನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಚೇತನ್ ಸಿಂಗ್ ಚೌಧರಿ ಅಮಾನತುಗೊಂಡಿರುವ ಆರ್ ಪಿಎಫ್ ಕಾನ್ಸ್ ಟೇಬಲ್. ಜುಲೈ 31ರಂದು ಮುಂಬೈ ಹೊರವಲಯದಲ್ಲಿ ಫಾಲ್ಘರ್ ರೈಲು ನಿಲ್ದಾಣದ ಸಮೀಪ ಜೈಪುರ-ಮುಂಬೈ ಸೂಪರ್ ಫಾಸ್ಟ್ ರೈಲಿನಲ್ಲಿ ಚೇತನ್ ಸಿಂಗ್ ಚೌಧರಿ ತನ್ನ ಹಿರಿಯ ಅಧಿಕಾರಿ ಟಿಕರಾಮ್ ಮೀನಾ ಹಾಗೂ ಮೂವರು ಪ್ರಯಾಣಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಅಧಿಕಾರಿ ಸೇರಿ ನಾಲ್ವರು ಸಾವನ್ನಪ್ಪಿದ್ದರು.
ಚೌಧರಿ ವಿರುದ್ಧ ಮೂರು ಶಿಸ್ತುಕ್ರಮ ಕುರಿತ ಪ್ರಕರಣ ದಾಖಲಾಗಿದೆ. ಸಧ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದು, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.