alex Certify BIG NEWS: ತಾಜ್ ಮಹಲ್ ಜಾಗ ನಮಗೆ ಸೇರಿದ್ದು: ಬಿಜೆಪಿ ಸಂಸದೆ ದಿಯಾ ಕುಮಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಜ್ ಮಹಲ್ ಜಾಗ ನಮಗೆ ಸೇರಿದ್ದು: ಬಿಜೆಪಿ ಸಂಸದೆ ದಿಯಾ ಕುಮಾರಿ

ನವದೆಹಲಿ: ತಾಜ್ ಮಹಲ್ ನಿರ್ಮಿಸಿದ ಭೂಮಿ ಮೂಲತಃ ತಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಭಾರತೀಯ ಜನತಾ ಪಕ್ಷದ ಸಂಸದೆ ಮತ್ತು ಜೈಪುರದ ಮಾಜಿ ರಾಜಕುಮಾರಿ ದಿಯಾ ಕುಮಾರಿ ಅವರು ಪ್ರತಿಪಾದಿಸಿದ್ದು, ಜೈಪುರ ರಾಜಮನೆತನ ಆ ಜಾಗದ ಮೇಲಿನ ಹಕ್ಕು ತೋರಿಸುವ ದಾಖಲೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದೂ ವಿಗ್ರಹಗಳ ಉಪಸ್ಥಿತಿಯನ್ನು ಪರಿಶೀಲಿಸಲು ತಾಜ್ ಮಹಲ್‌ನ 22 ಬೀಗ ಹಾಕಿದ ಕೊಠಡಿಗಳನ್ನು ಪರಿಶೀಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಗೆ ಸೂಚಿಸಲು ಅಲಹಾಬಾದ್ ಹೈಕೋರ್ಟ್‌ ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಿದ ನಂತರ ದಿಯಾ ಕುಮಾರಿ ಈ ಹೇಳಿಕೆ ನೀಡಿದ್ದಾರೆ.

ಸ್ಮಾರಕ ನಿರ್ಮಾಣಕ್ಕೂ ಮುನ್ನ ಏನಿತ್ತು ಎಂಬುದನ್ನು ತನಿಖೆ ಮಾಡಬೇಕು. ಇದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಈ ಬಗ್ಗೆ ಜೈಪುರ ಕುಟುಂಬದಲ್ಲಿ ದಾಖಲೆಗಳು ಲಭ್ಯವಿವೆ. ಅಗತ್ಯವಿದ್ದರೆ ಅದನ್ನು ಒದಗಿಸುವುದಾಗಿ ದಿಯಾ ಕುಮಾರಿ ಅವರು ಹೇಳಿದರು.

ಮೊಘಲ್ ದೊರೆ ಷಹಜಹಾನ್ ತನ್ನ ಕುಟುಂಬಕ್ಕೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾನೆ ಎಂದು ದಿಯಾ ಕುಮಾರಿ ದೂರಿದ್ದು, ಭೂಮಿಗೆ ಬದಲಾಗಿ ಪರಿಹಾರವನ್ನು ನೀಡಲಾಗಿದೆ. ಆದರೆ, ಅದು ಎಷ್ಟು, ಅದನ್ನು ಸ್ವೀಕರಿಸಲಾಗಿದೆಯೋ ಇಲ್ಲವೋ, ನಾನು ಇದನ್ನು ಹೇಳಲಾರೆ. ನಾನು ನಮ್ಮ ‘ಪೋತಿಖಾನ’ದಲ್ಲಿ ಇರುವ ದಾಖಲೆಗಳನ್ನು ಅಧ್ಯಯನ ಮಾಡಿಲ್ಲ. ಆದರೆ, ಆ ಭೂಮಿ ನಮ್ಮ ಕುಟುಂಬಕ್ಕೆ ಸೇರಿದ್ದು, ಷಹಜಹಾನ್ ಅದನ್ನು ಸ್ವಾಧೀನಪಡಿಸಿಕೊಂಡಿದ್ದರು. ನ್ಯಾಯಾಂಗ ಇಲ್ಲದ ಕಾರಣ ಆಗ ಯಾವುದೇ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಲಿಲ್ಲ. ದಾಖಲೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ವಿಷಯ ತಿಳಿಯಲಿದೆ ಎಂದು ದಿಯಾ ಕುಮಾರಿ ಹೇಳಿದ್ದಾರೆ.

ಜೈಪುರದ ಮಾಜಿ ರಾಜಮನೆತನದ ಪರವಾಗಿಯೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುತ್ತದೆಯೇ ಎಂದು ಕೇಳಿದಾಗ, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.

ತಾಜ್ ಮಹಲ್ ಸುತ್ತ ಪ್ರಸ್ತುತ ವಿವಾದ

ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ ಗಾಗಿ ನಿರ್ಮಿಸಿದ. ಷಹಜಹಾನ್ ತನ್ನ ಪತ್ನಿಯ ಸಮಾಧಿಯಾಗಿ ಪರಿವರ್ತಿಸಿದ ಸ್ಥಳದಲ್ಲಿ ಹಿಂದೆ ಶಿವ ದೇವಾಲಯವು ಹಿಂದೆ ಇತ್ತು ಎಂದು ಮನವಿಯಲ್ಲಿ ಹೇಳಲಾಗಿದೆ. ಬಹಳ ದಿನಗಳಿಂದ ಮುಚ್ಚಿರುವ ತಾಜ್ ಮಹಲ್‌ನ ಆ 22 ಕೊಠಡಿಗಳನ್ನು ತೆರೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ನಡೆಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಅಯೋಧ್ಯೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಸಲ್ಲಿಸಿದ ಅರ್ಜಿಯಲ್ಲಿ, ಕೆಲವು ಇತಿಹಾಸಕಾರರು ಮತ್ತು ಹಿಂದೂ ಗುಂಪುಗಳು ಶಿವ ದೇವಾಲಯ ಇತ್ತು ಎಂಬುದನ್ನು ಉಲ್ಲೇಖಿಸಿವೆ. ಬೀಗ ಹಾಕಿರುವ ಕೊಠಡಿಗಳ ಪರಿಶೀಲನೆಗೆ ವಿಶೇಷ ಸಮಿತಿ ರಚಿಸಿ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.

1965 ರಲ್ಲಿ ಇತಿಹಾಸಕಾರ PN ಓಕ್ ತನ್ನ ಪುಸ್ತಕದಲ್ಲಿ ತಾಜ್ ಮಹಲ್ ಮೂಲತಃ ಶಿವ ದೇವಾಲಯ ಎಂದು ಹೇಳಿಕೊಂಡಿದ್ದಾರೆ. 2015 ರಲ್ಲಿ ಆಗ್ರಾದ ಸಿವಿಲ್ ನ್ಯಾಯಾಲಯದಲ್ಲಿ ತಾಜ್ ಮಹಲ್ ಅನ್ನು ‘ತೇಜೋಮಹಲ್’ ಎಂದು ಘೋಷಿಸಲು ಅರ್ಜಿ ಸಲ್ಲಿಸಲಾಯಿತು. 2017ರಲ್ಲಿ ಬಿಜೆಪಿ ಸಂಸದ ವಿನಯ್ ಕಟಿಯಾರ್ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ತಾಜ್ ಮಹಲ್ ಅನ್ನು ತೇಜೋಮಹಲ್ ಎಂದು ಘೋಷಿಸುವಂತೆ ಒತ್ತಾಯಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...