ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇತ್ತೀಚೆಗೆ ಬಸ್ ಕಂಡಕ್ಟರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ನಡುವೆ ಮಾರಾಮಾರಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೈಪುರ ಮೆಟ್ರೋ ಎರಡನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ (ಫೆಬ್ರವರಿ 11) ನಿವೃತ್ತ ಐಎಎಸ್ ರಾಮಧನ್ ಮೀನಾ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ. ಕಾರ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಕಂಡಕ್ಟರ್ ಘನಶ್ಯಾಮ್ ಶರ್ಮಾ ಅವರ ವಕೀಲರು, ಪ್ರಯಾಣಿಕರು ಟಿಕೆಟ್ ತೆಗೆದುಕೊಂಡ ನಂತರ ನಿಗದಿಪಡಿಸಿದ ಸ್ಥಳದಲ್ಲಿ ಇಳಿಯುವ ಬದಲು ಮುಂದಿನ ನಿಲ್ದಾಣದವರೆಗೆ ಪ್ರಯಾಣಿಸಿದರು. ಕಂಡಕ್ಟರ್ ಟಿಕೆಟ್ ಹಣ 10 ರೂಪಾಯಿ ಕೇಳಿದಾಗ ವಾಗ್ವಾದ ಶುರುವಾಯಿತು. ಈ ವೇಳೆ ಹಲ್ಲೆ ಕೂಡ ನಡೆಯಿತು. ಪ್ರಯಾಣಿಕರು ಸರ್ಕಾರಿ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಾದಿಸಿದ್ದರು.
ಜನವರಿ 10 ರಂದು ಜೈಪುರದ ಫ್ಲೋರ್ ಬಸ್‌ನಲ್ಲಿ ಕಂಡಕ್ಟರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ನಡುವೆ ಮಾರಾಮಾರಿ ನಡೆದಿತ್ತು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮಾಹಿತಿ ಪ್ರಕಾರ, ನಿವೃತ್ತ ಐಎಎಸ್ ಅಧಿಕಾರಿ ಆಗ್ರಾ ರಸ್ತೆಯ ಕಾನೋತಾ ಬಸ್ ನಿಲ್ದಾಣದಲ್ಲಿ ಇಳಿಯಬೇಕಿತ್ತು, ಆದರೆ ಅವರಿಗೆ ನಿದ್ದೆ ಬಂದಿದ್ದು, ಬಸ್ ನಿಲ್ಲಿಸುವಂತೆ ಹೇಳಿದಾಗ, ಬಸ್ ಕಂಡಕ್ಟರ್ ಅವರ ಬಳಿ 10 ರೂಪಾಯಿ ಕೇಳಿ ಟಿಕೆಟ್ ನೀಡಿದ್ದರು. ಆದರೆ ನಿವೃತ್ತ ಐಎಎಸ್ ಅಧಿಕಾರಿ ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ಜಗಳವಾಯಿತು.
ನಂತರ, ಜೆಸಿಟಿಎಸ್ಎಲ್ ಹಲ್ಲೆ ನಡೆಸಿದ ನಿರ್ವಾಹಕರನ್ನು ಅಮಾನತುಗೊಳಿಸಿತ್ತು. ರಾಜಸ್ಥಾನ ಪೊಲೀಸರು ವಿಡಿಯೋವನ್ನು ಪರಿಶೀಲಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಬಸ್ ಕಂಡಕ್ಟರ್ ನಡುವೆ ಹಣದ ವಿಚಾರಕ್ಕೆ ಮೊದಲು ವಾಗ್ವಾದ ನಡೆದು ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಎಂದು ತಿಳಿದುಬಂದಿದೆ. ಈಗ ಈ ಪ್ರಕರಣದಲ್ಲಿ ನ್ಯಾಯಾಲಯವು ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದೆ.
View this post on Instagram