ಜೈಪುರ್: ಕೊರೋನಾ ಸೋಂಕಿನಿಂದ ತಂದೆ ಮೃತಪಟ್ಟಿದ್ದರಿಂದ ಆಘಾತಕ್ಕೆ ಒಳಗಾದ ಪುತ್ರಿ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.
ದಾಮೋದರದಾಸ್(73) ಕೊರೋನಾ ಸೋಂಕಿನಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ನಂತರ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುವ ಸಂದರ್ಭದಲ್ಲಿ ಅವರ ಕಿರಿಯ ಪುತ್ರಿ ಚಂದ್ರಕಲಾ ಸ್ಮಶಾನಕ್ಕೆ ಹೋಗಬೇಕೆಂದು ಪಟ್ಟುಹಿಡಿದಿದ್ದಾರೆ. ಆಕೆಗೆ ಸ್ಮಶಾನದ ಒಳಗೆ ಹೋಗಲು ಅವಕಾಶ ನೀಡಿಲ್ಲ. ಆದರೂ ಸ್ಮಶಾನ ಹೋದ ಚಂದ್ರಕಲಾ ತಂದೆಯ ಅಂತ್ಯಕ್ರಿಯೆ ವೇಳೆ ಚಿತೆಯ ಬೆಂಕಿಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆಗಾಗಲೇ ಶೇಕಡ 70 ರಷ್ಟು ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಚಂದ್ರಕಲಾ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.