ಜೈಪುರ: ಜೈಪುರದ ವ್ಯಕ್ತಿಯೊಬ್ಬರು ಮರದಿಂದ ತಯಾರಿಸಿರುವ ವಿಶ್ವದ ಅತ್ಯಂತ ಚಿಕ್ಕ ಚಮಚವನ್ನು ತಯಾರಿಸಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. ನವರತನ್ ಪ್ರಜಾಪತಿ ಎನ್ನುವವರು ಕೇವಲ 2 ಮಿ.ಮೀ ಎತ್ತರ ಮತ್ತು 0.7 ಇಂಚು ಉದ್ದದ ಚಮಚವನ್ನು ರಚಿಸಿದ್ದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೇರಿಸಿದ್ದಾರೆ.
ಈ ಬಗ್ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಚಮಚವನ್ನು ತಯಾರಿಸುವ ಪ್ರಜಾಪತಿಯ ಕಿರು ವಿಡಿಯೋ ಶೇರ್ ಮಾಡಿಕೊಂಡಿದೆ. ವಿಡಿಯೋದಲ್ಲಿ, ಪ್ರಜಾಪತಿಯವರು ಪರಿಣತಿಯೊಂದಿಗೆ ವಿಶ್ವದ ಅತ್ಯಂತ ಚಿಕ್ಕ ಚಮಚವನ್ನು ತಯಾರಿಸುವುದನ್ನು ಕಾಣಬಹುದು.
ಚಮಚದ ಗಾತ್ರವನ್ನು ತೋರಿಸಲು ಅವರು ಅದನ್ನು ಅಕ್ಕಿ ಧಾನ್ಯದ ಮೇಲೆ ಇರಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಯ ಬಳಿಕ ಮಾತನಾಡಿದ ಅವರು, ನನಗೆ ಕೊಹಿನೂರ್ ವಜ್ರ ಸಿಕ್ಕಷ್ಟು ಖುಷಿಯಾಗಿದೆ. ಪ್ರಶಸ್ತಿ ಸ್ವೀಕರಿಸಿದ ನಂತರ ನನ್ನ ತಲೆಯ ಮೇಲೆ ಅತ್ಯಂತ ಭವ್ಯವಾದ ಕಿರೀಟವನ್ನು ಧರಿಸಿರುವಂತೆ ಅನ್ನಿಸುತ್ತದೆ ಎಂದಿದ್ದಾರೆ.