ಬೆಳಗಾವಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನಾರಾಯಣ ಮಾಳಿ, ಹುಸೇನ್ ಢಲಾಯತ್ ಬಂಧಿತ ಆರೋಪಿಗಳು. ರಾಯಭಾಗ ತಾಲುಕು ಖಟಕಬಾವಿಯ ನಾರಾಯಣ ಮಾಳಿ ಜಮೀನು ಗುತ್ತಿಗೆ ಪಡೆದು ಉಳುಮೆ ಮಾಡುತ್ತಿದ್ದ. ರಾಯಭಾಗ ಹಲವು ವರ್ಷಗಳಿಂದ ಹಿರೇಕೋಡಿಯಲ್ಲಿ ವಾಸವಾಗಿದ್ದ.
ಜೈನ ಮುನಿ ಆಶ್ರಮದ ಬಳಿ ಜಮೀನು ಲೀಸ್ ಪಡೆದು ಉಳುಮೆ ಮಾಡಿಕೊಂಡಿದ್ದ. ಇದೇ ವೇಳೆ ಜೈನ ಮುನಿಗೆ ಆತ ಆಪ್ತನಾಗಿದ್ದ. ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೈನ ಮುನಿಗಳ ವಿಶ್ವಾಸವನ್ನು ಗಳಿಸಿದ್ದ. ವೈಯಕ್ತಿಕ ಕಾರಣಕ್ಕೆ ಅವರಿಂದ 6 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಜೈನ ಮುನಿಗಳನ್ನು ಆರೋಪಿ ಕೊಲೆ ಮಾಡಿದ್ದಾನೆ.
ಜುಲೈ 5ರಂದು ರಾತ್ರಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಮಾಡಿದ್ದಾನೆ ಹೀರೆಕೋಡಿ ನಂದಿ ಪರ್ವತ ಆಶ್ರಮದ ಕೋಣೆಯಲ್ಲಿ ಜೈನ ಮುನಿಗಳಿಗೆ ಕರೆಂಟ್ ಶಾಕ್ ನೀಡಿ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಸ್ನೇಹಿತ ಹುಸೇನ್ ಗೆ ಕರೆ ಮಾಡಿ ಕರೆಸಿಕೊಂಡಿದ್ದ ನಾರಾಯಣ ಮಾಳಿ, ಮೃತ ದೇಹವನ್ನು ಕತ್ತರಿಸಿ ಬಟ್ಟೆ ಸುತ್ತಿದ್ದು, ಕೊಳವೆ ಬಾವಿಗೆ ಹಂತಕರು ಎಸೆದಿದ್ದಾರೆ. ಕೊಲೆಯಾದ ನಂತರ ಆರನೇ ಹುಡುಕಾಟದ ನಾಟಕವಾಡಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಸೂಚನೆ
ಜೈನಮುನಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕಾನೂನುಬಾಹಿರ ಕೃತ್ಯವೆಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ತಿಳಿಸಿದ್ದಾರೆ.