ಶಿವಮೊಗ್ಗ: ಜೈಲರ್ ಸಂತೋಷ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ನಾಗವೇಣಿ(27) ಸೇರಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೂವರಿಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಆರು ವರ್ಷಗಳ ಹಿಂದೆ ಶಿವಮೊಗ್ಗದ ಹನುಮಂತನಗರದಲ್ಲಿ ನಡೆದಿದ್ದ ಜೈಲರ್ ಸಂತೋಷ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ನಾಗವೇಣಿ ಮತ್ತು ಪರಿಚಿತ ಮಹಿಳೆ ಜಹೀರಾಬಿ(41) ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲರಾದಲ್ಲಿ 4 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಮೂವರು ಅಪರಾಧಿಗಳಾದ ಹನುಮಂತನಗರದ ಜಬಿವುಲ್ಲಾ(23) ಮಹಮ್ಮದ್ ಇಮ್ರಾನ್(25), ಚಂದ್ರಕುಮಾರ್(24) ಅವರಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರದಲ್ಲಿ ಹೆಚ್ಚುವರಿ ಮೂರು ತಿಂಗಳು ಶಾಲಾ ಸಾದಾ ಶಿಕ್ಷೆ ವಿಧಿಸಲಾಗಿದೆ.
2018ರ ಡಿಸೆಂಬರ್ 12ರಂದು ಕೌಟುಂಬಿಕ ಕಲಹದಿಂದ ಜೈಲರ್ ಸಂತೋಷ್(34) ಅವರಿಗೆ ಪತ್ನಿ ನಾಗವೇಣಿ ಮತ್ತು ಜಹೀರಾಬಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಇತತರು ಸೇರಿ ಮೃತದೇಹವನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿ ಸವಳಂಗ ರಸ್ತೆಯಲ್ಲಿ ಎಸೆದಿದ್ದರು.
ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಆಗಿನ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎಂ. ಸುರೇಶ್ ಕುಮಾರ್ ವಾದ ಮಂಡಿಸಿದ್ದರು.