ಬುದ್ಧಿಮಾಂದ್ಯ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ತನ್ನ ರಾಜ್ಯದಿಂದ ಪಕ್ಕದ ರಾಜ್ಯಕ್ಕೆ ತೆರಳಿದ್ದು, ನಾನು ಯಾರು, ಎಲ್ಲಿಂದ ಬಂದಿದ್ದೇನೆ ಎಂಬುದನ್ನು ಅರಿಯದೆ ನೆರವಿಗಾಗಿ ಪರಿತಪಿಸುತ್ತಿದ್ದಾಗ ಆತ ಧರಿಸಿದ್ದ ಚಪ್ಪಲಿಯಿಂದ ಕುಟುಂಬದೊಂದಿಗೆ ಸೇರಲು ಸಹಾಯಕವಾಗಿದೆ. ಇಂತಹದೊಂದು ಹೃದಯಸ್ಪರ್ಶಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಘಟನೆಯ ವಿವರ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗ್ರಾಮ ಒಂದರ ಬಳಿ ಸುರೇಶ್ ಮುಡಿಯ ಎಂದು ಗುರುತಿಸಲಾದ ವ್ಯಕ್ತಿ ಮಲಗಿದ್ದು ಕಂಡುಬಂದಿತ್ತು. ಈತನನ್ನು ಗಮನಿಸಿದ ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಠಾಣೆಗೆ ಕರೆದುಕೊಂಡು ಹೋದಾಗ ಬುದ್ಧಿಮಾಂದ್ಯತೆ ಕಾರಣಕ್ಕೆ ಯಾವುದೇ ಮಾಹಿತಿ ನೀಡಲು ಶಕ್ತನಾಗಿರಲಿಲ್ಲ. ಆಗ ಪೊಲೀಸರು ಗ್ರಾಮಸ್ಥರಿಗೆ ಹವ್ಯಾಸಿ ರೇಡಿಯೋ ಆಪರೇಟರ್ ಗಳನ್ನು ಸಂಪರ್ಕಿಸಲು ಸೂಚಿಸಿದ್ದಾರೆ.
ಅದರಂತೆ ಅವರ ಬಳಿ ಹೋದಾಗ ಬುದ್ಧಿಮಾಂದ್ಯ ವ್ಯಕ್ತಿ ಧರಿಸಿದ್ದ ಚಪ್ಪಲಿ ಎಲ್ಲರ ಗಮನ ಸೆಳೆದಿದೆ. ಕಪ್ಪು ಬಣ್ಣದ ಈ ರಬ್ಬರ್ ಚಪ್ಪಲಿಯನ್ನು ಮಧ್ಯಪ್ರದೇಶದ ಜೈಲಿನ ಕೈದಿಗಳಿಗೆ ನೀಡಲಾಗುತ್ತದೆ ಎಂಬ ಮಾಹಿತಿ ಮೇರೆಗೆ ಅಲ್ಲಿಗೆ ಸಂಪರ್ಕಿಸಿದಾಗ ಕೊಲೆ ಆರೋಪದಲ್ಲಿ 20 ವರ್ಷಗಳ ಶಿಕ್ಷೆಗೆ ಒಳಗಾಗಿದ್ದ ಸುರೇಶ್ ಮಧ್ಯಪ್ರದೇಶದ ಜೈಲಿನಲ್ಲಿ ಇದ್ದದ್ದು ತಿಳಿದು ಬರುತ್ತದೆ. ಅಲ್ಲದೆ ಬಿಡುಗಡೆ ಸಂದರ್ಭದಲ್ಲಿ ಬುದ್ಧಿ ಭ್ರಮಣೆಗೆ ಒಳಗಾಗಿದ್ದ ಎಂಬ ಸಂಗತಿ ಬೆಳಕಿಗೆ ಬರುತ್ತದೆ.
ಸುರೇಶ್ ಬಿಡುಗಡೆಯಾದಾಗ ಕರುಣೆಯಿಂದ ಜೈಲಿನ ಅಧಿಕಾರಿಗಳು ಅಲ್ಲಿದ್ದಾಗ ನೀಡಲಾಗಿದ್ದ ಚಪ್ಪಲಿಯನ್ನು ಧರಿಸಲು ಅವಕಾಶ ನೀಡಿರುತ್ತಾರೆ. ಕಡೆಗೆ ಹವ್ಯಾಸಿ ರೇಡಿಯೋ ಆಪರೇಟರ್ಗಳು ಜೈಲಿನ ಅಧಿಕಾರಿಗಳ ಬಳಿಯಿಂದ ಸುರೇಶ್ ವಿಳಾಸ ಪಡೆದು ಅಂತಿಮವಾಗಿ ಆತನ ತಾಯಿ ಕಾಂತಿ ಬಾಯಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಇದೀಗ ಕೊನೆಗೂ ತಾಯಿ – ಮಗ ಒಂದಾಗುವ ಸಮಯ ಕೂಡಿ ಬಂದಿದ್ದು, ಇದಕ್ಕೆ ನೆರವಾಗಿದ್ದು ಮಾತ್ರ ಕಪ್ಪು ಬಣ್ಣದ ರಬ್ಬರ್ ಚಪ್ಪಲಿ ಎಂಬುದು ಗಮನಾರ್ಹ ಸಂಗತಿ.