ಬೆಳಗಾವಿ: ಧಾರವಾಡ ಅಥವಾ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಎರಡೂ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಇನ್ನೊಂದೆಡೆ ಬೆಳಗಾವಿ ಬಿಜೆಪಿ ಟಿಕೆಟ್ ಬಹುತೇಕ ಫೈನಲ್ ಆಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಬೆಳಗಾವಿ ಬಿಜೆಪಿ ನಾಯಕರು ಶೆಟ್ಟರ್ ಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದಾರೆ.
ಬೆಳಗಾವಿ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡದಂತೆ ವಿರೋಧಿಸಿದ್ದು, ಈ ನಿಟ್ಟಿನಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ಗೆ ಮನವಿ ಮಾಡಲು ಮುಂದಾಗಿದ್ದಾರೆ.
ಈ ವಿಚಾರವಾಗಿ ಬಿಜೆಪಿ ಹಿರಿಯ ನಾಯಕ ಪ್ರಭಾಕರ ಕೋರೆ ನಿವಾಸದಲ್ಲಿ ಇಂದು ಮತ್ತೊಂದು ಸುತ್ತಿನ ಸಭೆ ಕರೆದಿದ್ದು, ಅಭಯ್ ಪಾಟೀಲ್, ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಮಹಾಂತೇಶ್ ಕವಟಗಿಮಠ, ಎಂಬಿ ಜಿರಲೆ ಸೇರಿದಂತೆ ಹಲವು ಮುಖಂಡರು ಚರ್ಚಿಸಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ದೆಹಲಿಗೆ ತೆರಳಲು ಯೋಜನೆ ರೂಪಿಸಿದ್ದಾರೆ.
ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಜಗದೀಶ್ ಶೆಟ್ಟರ್ ಗೆ ಬೆಳಗಾವಿ ಬಿಜೆಪಿ ಟಿಕೆಟ್ ನೀಡಿದರೆ ಪರಿಣಾಮ ಬೇರೆಯಾಗಲಿದೆ ಎಂದು ಬಿಜೆಪಿ ನಾಯಕರು ಸಂದೇಶ ರವಾನಿಸಿದ್ದಾರೆ. ಒಟ್ಟಾರೆ ಬೆಳಗಾವಿ ಬಿಜೆಪಿ ಟಿಕೆಟ್ ವಿಚಾರವಾಗಿ ಹೈಕಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದುನೋಡಬೇಕಿದೆ.