ಬೆಂಗಳೂರು: ಚೀಟಿ ಎತ್ತಿ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಕುಟುಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡುವಾಗ ಪ್ರತಿಪಕ್ಷ ನಾಯಕನ ಸ್ಥಾನ ಖಾಲಿ ಇರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್, ಚೀಟಿ ಎತ್ತಿ ತಾತ್ಕಾಲಿಕವಾಗಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್ ಪ್ರತಿ ಪಕ್ಷ ನಾಯಕರನ್ನು ಆಯ್ಕೆ ಮಾಡುವವರೆಗೆ ಸಭಾಪತಿ ಚೀಟಿ ಎತ್ತಿ ತಾತ್ಕಾಲಿಕ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವಂತೆ ಶೆಟ್ಟರ್ ಸಲಹೆ ನೀಡಿದ್ದು, ಬಿಜೆಪಿಯ ಮುಂಚೂಣಿಯಲ್ಲಿರುವ ನಾಲ್ಕೈದು ಸದಸ್ಯರ ಹೆಸರನ್ನು ಚೀಟಿಯಲ್ಲಿ ಬರೆದು ಹಾಕಿ ಅದರಲ್ಲಿ ಒಂದನ್ನು ಎತ್ತಿ ತಾತ್ಕಾಲಿಕವಾಗಿ ಪ್ರತಿಪಕ್ಷ ನಾಯಕ ತುಂಬಬಹುದು ಎಂದು ಕುಟುಕಿದ್ದಾರೆ.
ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಮ್ಮನ್ನು ಸಾಕಿ ಬೆಳೆಸಿದ ಜಗದೀಶ್ ಶೆಟ್ಟರ್ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. ಇದು ಜಗದೀಶ್ ಶೆಟ್ಟರ್ ಅವರಿಗೆ ಶೋಭೆ ತರುವುದಿಲ್ಲ ಎಂದರು.
ಇದಕ್ಕೆ ಸಚಿವ ಕೆ.ಎನ್. ರಾಜಣ್ಣ, ನಿಮ್ಮ ಒಳಿತಿಗಾಗಿಯೇ ಅವರು ಸಲಹೆ ನೀಡಿದ್ದಾರೆ ಸ್ವೀಕರಿಸಿ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಶಿಸ್ತಿನ ಪಕ್ಷ ಎನ್ನುತ್ತಾರೆ. ವಿಧಾನಸಭೆ, ವಿಧಾನಪರಿಷತ್ ನಲ್ಲಿ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಿಲ್ಲ. ಅದು ಸಾಂವಿಧಾನಿಕ ಹುದ್ದೆ. ಆ ಹುದ್ದೆಗಳು ಖಾಲಿ ಇವೆ ಎಲ್ಲಾ ಎಂಬುದೇ ನಮ್ಮ ವ್ಯಥೆಯಾಗಿದೆ ಎಂದು ಹೇಳಿದ್ದಾರೆ.