ಹುಬ್ಬಳ್ಳಿ: ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಇಲ್ಲ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ಚುನಾವಣೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದಿನ ಚುನಾವಣೆ ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಸ್ವಾಮೀಜಿಗಳ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆಯಿಂದ ಆಡಳಿತಕ್ಕೆ ತೊಂದರೆಯಾಗುತ್ತದೆ. ಪದೇ ಪದೇ ಇಂತಹ ಚರ್ಚೆಗಳಿಂದ ನಮಗೆ ತೊಂದರೆಯಾಗುತ್ತಿದೆ. ಕೆಲಸ ಮಾಡುವುದಕ್ಕೆ ಸಮಸ್ಯೆಯಾಗುತ್ತದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ. ಇಂತಹ ಚರ್ಚೆಗಳು ಎಲ್ಲಿಂದ ಹುಟ್ಟಿಕೊಂಡಿದೆಯೋ ಗೊತ್ತಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇರುತ್ತಾರೆ ಎಂದು ಹೇಳಿದ್ದಾರೆ.