
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಬಲಿಗರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದ್ದೇನೆ. ಇಂದು ರಾತ್ರಿ ಪಕ್ಷದ ರಾಷ್ಟ್ರೀಯ ನಾಯಕರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ವರಿಷ್ಠರ ಸಂದೇಶ ತಿಳಿಸಲಿದ್ದಾರೆ. ಅವರ ನಿರ್ಧಾರ ಏನೆಂಬುದನ್ನು ತಿಳಿಸುತ್ತೇನೆ. ನನಗೆ ಟಿಕೆಟ್ ನೀಡುತ್ತಾರೋ ಇಲ್ಲವೋ ಎಂಬುದಷ್ಟೇ ಈಗಿರುವ ಪ್ರಶ್ನೆ ಶೆಟ್ಟರ್ ತಿಳಿಸಿದ್ದಾರೆ.
ನಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ಕೊಡುವುದಾಗಿ ಹೇಳಿದ್ದು, ಇದಕ್ಕೆ ಒಪ್ಪಿಲ್ಲ. ನಾನು ಮಾತ್ರ ಚುನಾವಣೆಗೆ ನಿಲ್ಲುತ್ತೇನೆ. ನಮ್ಮ ಕುಟುಂಬದ ಸದಸ್ಯರು ಯಾರೂ ಚುನಾವಣೆಗೆ ನಿಲ್ಲಲ್ಲ ಎಂದು ವರಿಷ್ಠರಿಗೆ ಹೇಳಿದ್ದೇನೆ. ನಾನು ಕುಟುಂಬದ ಸದಸ್ಯರ ಅಥವಾ ಬೇರೆಯವರ ಹೆಸರು ಹೇಳಲ್ಲ. ನನ್ನ ಮೈನಸ್ ಪಾಯಿಂಟ್ಸ್ ಏನೆಂದು ಕೇಳಿದ್ದೇನೆ. ಆದರೆ ಉತ್ತರ ಸಿಕ್ಕಿಲ್ಲ ಎಂದರು.
ನನ್ನಂತಹ ಹಿರಿಯ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ರಾಜಕೀಯ ವ್ಯವಸ್ಥೆಯಲ್ಲಿ ಇದೆಲ್ಲ ಸಹಜ. ನಾಯಕರು ಬಂದು ಅದೇನು ಮಾತನಾಡುತ್ತಾರೆ ನೋಡೋಣ. ನಾನು ಶಾಸಕನಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದೇನೆ ಎಂದರು.
30 ವರ್ಷಗಳಿಂದ ನಾನು ಪಾರ್ಟಿಯಲ್ಲಿದ್ದೇನೆ. ಬೇರೆ ಯಾವ ಪಕ್ಷದವರೂ ನನ್ನನ್ನು ಸಂಪರ್ಕಿಸಿಲ್ಲ. ನಾನೂ ಕೂಡ ಸಂಪರ್ಕಿಸಿಲ್ಲ. ನಾಮಪತ್ರ ಸಲ್ಲಿಸಲು ಏ. 20 ಕೊನೆ ದಿನ. ಇವತ್ತೇ ಹಗ್ಗಜಗ್ಗಾಟ ಕೊನೆಯಾಗಲಿದೆ. ನಾನು ಸ್ಪರ್ಧಿಸವುದಂತೂ ನಿಶ್ಚಿತ. ಗೆಲ್ಲುವುದೂ ನಿಶ್ಚಿತ ಎಂದರು.
ನನಗೆ ರಾಜ್ಯಪಾಲ, ರಾಜ್ಯಸಭೆ ಸದಸ್ಯ ಸ್ಥಾನದ ಆಫರ್ ನೀಡಿಲ್ಲ. ಇಂದು ನಾಯಕರು ಬಂದು ಮಾತನಾಡಿದ ನಂತರ ಮುಂದಿನ ಬೆಳವಣಿಗೆ ಏನೆಂಬುದು ತಿಳಿಯಲಿದೆ. ನಾಯಕರು ಭೇಟಿಯಾಗದಿದ್ದರೆ ರಾಜೀನಾಮೆ ನೀಡಲು ಸಿದ್ಧ ಎಂದರು.