ಶಿರಸಿ: ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್ ಅವರು, ಸ್ಥಾನಮಾನ ಕೊಟ್ಟಿದ್ದ ಬಿಜೆಪಿಯನ್ನು ಯಡಿಯೂರಪ್ಪ ಬಿಟ್ಟಿರಲಿಲ್ಲವೇ ಎಂದು ಪ್ರಶ್ನಿಸಿದ್ದು, ಅದರ ಬಗ್ಗೆ ವಾದ ವಿವಾದ ಬೇಡ. ನನ್ನ ಪರವಾಗಿ ಯಡಿಯೂರಪ್ಪ ವರಿಷ್ಠರ ಮೇಲೆ ಬಹಳ ಒತ್ತಡ ಹಾಕಿದ್ದಾರೆ. ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡಿದ್ದೇವೆ. ಯಡಿಯೂರಪ್ಪ, ಅನಂತಕುಮಾರ್ ನೇತೃತ್ವದಲ್ಲಿ ನಾವು ಪಕ್ಷ ಸಂಘಟಿಸಿದ್ದೇವೆ. ಆದರೆ, ಈಗ ಕೆಲವರು ನಮ್ಮ ಮನೆಯಿಂದಲೇ ನಮ್ಮನ್ನು ಹೊರಗೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ನನಗೆ ಯಾವ ಪಕ್ಷದರು ಮಾತನಾಡಿಸಿಲ್ಲ. ನಾನು ಯಾರೊಂದಿಗೂ ಮಾತನಾಡಿಲ್ಲ. ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಷಡ್ಯಂತ್ರ ಮಾಡಿದ್ದಾರೆ. ಪಕ್ಷ ಕಟ್ಟಿದವರನ್ನೇ ಮನೆಯಿಂದ ಹೊರಗೆ ಹಾಕುತ್ತಿದ್ದಾರೆ. ಸಿಎಂ ಸೇರಿದಂತೆ ನನಗೆ ಯಾವುದೇ ಹುದ್ದೆ ಬೇಡ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೆಟ್ಟರ್ ಹೇಳಿದ್ದಾರೆ.
ನಾನು ರೌಡಿಶೀಟರ್ ಅಲ್ಲ, ನನ್ನ ಯಾವುದೇ ಸಿಡಿ ಇಲ್ಲ. ಜನರ ಅಪೇಕ್ಷೆ ಮೇರೆಗೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಮೂಲ ಬಿಜೆಪಿಗರನ್ನೇ ಹೊರ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.