ಹುಬ್ಬಳ್ಳಿ: ಸ್ವಾಭಿಮಾನವನ್ನು ಬಿಟ್ಟು ಹೇಗೆ ಸಂಪುಟಕ್ಕೆ ಸೇರ್ಪಡೆಯಾಗಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿಯ ಆರ್.ಎಸ್.ಎಸ್. ಕಚೇರಿ ಬಳಿ ಮಾತನಾಡಿದ ಅವರು, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ನನಗೂ ಕೂಡ ಸ್ವಾಭಿಮಾನ ಮತ್ತು ನೈತಿಕತೆ ಇದೆ. ನಾನು ಶಾಸಕನಾಗಿದ್ದೇನೆ. ಶಾಸಕನಾಗಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ.
ಸ್ವಾಭಿಮಾನ ಬಿಟ್ಟು ಹೇಗೆ ಸಂಪುಟಕ್ಕೆ ಸೇರಲಿ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಶೆಟ್ಟರ್, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗಲ್ಲವೆಂದು ಪುನರುಚ್ಛರಿಸಿದ್ದಾರೆ.
ಯಡಿಯೂರಪ್ಪ ಹಿರಿಯರಾದ ಕಾರಣ ಅವರ ಸಂಪುಟದಲ್ಲಿ ಸಚಿವನಾಗಿದ್ದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿರುವುದು ಖುಷಿ ತಂದಿದೆ. ಅವರ ಸಂಪುಟದಲ್ಲಿ ಸಚಿವನಾಗಲು ಆಸಕ್ತಿ ಇಲ್ಲ. ನನ್ನ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದೇನೆ ಎಂದು ನಿನ್ನೆಯಷ್ಟೇ ಶೆಟ್ಟರ್ ತಿಳಿಸಿದ್ದರು.