ಬೆಂಗಳೂರು: ಸಂಪುಟ ಸೇರದಿರಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರ್ಧರಿಸಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.
ನನಗೆ ಸಚಿವ ಸ್ಥಾನ ಬೇಡವೆಂದು ಶೆಟ್ಟರ್ ಹೇಳಿದ್ದು. ಕಿರಿಯರಿಗೆ ಸಚಿವ ಸ್ಥಾನ ಕೊಡುವಂತೆ ಸಲಹೆ ನೀಡಿದ್ದಾರೆ. ಮಾಜಿ ಸಿಎಂ ಆಗಿದ್ದರೂ, ಬಿ.ಎಸ್.ವೈ. ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ಸಿಎಂ ಬದಲಾದ ಹಿನ್ನಲೆಯಲ್ಲಿ ಸಂಪುಟಕ್ಕೆ ಸೇರದಿರಲು ತೀರ್ಮಾನಿಸಿದ್ದಾರೆ.
ಯಡಿಯೂರಪ್ಪ ಹಿರಿಯರಾದ ಕಾರಣ ಅವರ ಸಂಪುಟದಲ್ಲಿ ಸಚಿವನಾಗಿದ್ದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿರುವುದು ಖುಷಿ ತಂದಿದೆ. ಅವರ ಸಂಪುಟದಲ್ಲಿ ಸಚಿವನಾಗಲು ಆಸಕ್ತಿ ಇಲ್ಲ. ಕಟೀಲು ಆಡಿಯೋಗೂ ಇದಕ್ಕೂ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ. ನನ್ನ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.
ನೈತಿಕ ಕಾರಣದಿಂದ ನಾನು ಸಂಪುಟಕ್ಕೆ ಸೇರುವುದಿಲ್ಲ ಎಂದು ತಿಳಿಸಿದ್ದು, ಈ ಹಿಂದೆ ನಾನು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿದ್ದೇನೆ. ಈಗಲೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ಬಾಂಬ್ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಜಗದೀಶ್ ಶೆಟ್ಟರ್, ಮತ್ತು ಈಶ್ವರಪ್ಪ ಟೀಂ ಹೊರಗೆ ಹೋಗುತ್ತದೆ ಎಂದು ಹೇಳಲಾಗಿದ್ದ ಆಡಿಯೋ ರಾಜಕೀಯದಲ್ಲಿ ಭಾರಿ ಬದಲಾವಣೆಯ ಸುಳಿವು ನೀಡಿತ್ತು. ಅದು ನಿಜವಾಗಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರದಿರಲು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿರ್ಧರಿಸಿದ್ದಾರೆ.