ಬೆಂಗಳೂರು: ಅಯೋಧ್ಯೆ ಹೋರಾಟ ವಿಚಾರವಾಗಿ ದಾಖಲಾದ ಪ್ರಕರಣಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಯೋಧ್ಯೆ ವಿಚಾರವಾಗಿ ದಾಖಲಾದ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯಲಿ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದ್ದಾರೆ.
ಬಂಧಿಸಿ ಎಂದು ಸರ್ಕಾರ ಹೇಳಿರುವುದಿಲ್ಲ. ಕೋರ್ಟ್ ಆದೇಶವಾಗಿರಬಹುದು, ಇಲ್ಲವೇ ಪೊಲೀಸರೇ ನಿರ್ಧರಿಸಬಹುದು. ಸರ್ಕಾರವೇ ಇದನ್ನು ಮಾಡಿಸಿದೆ ಎನ್ನುವುದನ್ನು ನಾನು ಒಪ್ಪಲಾರೆ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಅದನ್ನು ರದ್ದು ಮಾಡಿದ್ದರೆ ಮುಗಿದು ಹೋಗುತ್ತಿತ್ತು. ಈಗ ಪ್ರತಿಭಟನೆ ನಡೆಸುವ ಅಗತ್ಯವಿರಲಿಲ್ಲೆ ಎಂದು ಹೇಳಿದ್ದಾರೆ.
ಅಯೋಧ್ಯೆ ವಿಚಾರದಲ್ಲಿ ಗಲಭೆಗಳಾದ ಸಂದರ್ಭದಲ್ಲಿ ರೌಡಿಶೀಟ್ ಓಪನ್ ಮಾಡುತ್ತಿದ್ದರು. ಈಗ ಅವರೆಲ್ಲ 50 -60 ವರ್ಷದವರಿದ್ದಾರೆ. ಅಂತವರನ್ನು ರೌಡಿ ಶೀಟ್ ನಿಂದ ತೆಗೆಯಿರಿ ಎಂದು ನಾನು ಪೋಲಿಸ್ ಆಯುಕ್ತರಿಗೆ ಹೇಳಿದ್ದೆ. ಸಚಿವ ಸಂಪುಟಕ್ಕೆ ಈ ವಿಚಾರ ತಂದು ಪ್ರಕರಣ ವಾಪಸ್ ಪಡೆಯುವ ಪ್ರಯತ್ನ ಮಾಡಿದ್ದೆ ಎಂದು ತಿಳಿಸಿದ್ದಾರೆ.
ರಾಮಮಂದಿರಕ್ಕೆ ನಾನು ಎರಡು ಕೋಟಿ ರೂ. ನಷ್ಟು ಹಣ ಸಂಗ್ರಹಿಸಿ ಕೊಟ್ಟಿದ್ದೇನೆ. ಪಕ್ಷ ಬದಲಿಸಿದ ನಂತರ ನಾವು ರಾಮ ಭಕ್ತರೇ ಅಲ್ಲವೆಂದು ಹೇಳುತ್ತಿದ್ದಾರೆ. ಅಭಿವೃದ್ಧಿ ಮೇಲೆ ಚುನಾವಣೆಗೆ ಹೋಗಬೇಕು. ಧರ್ಮದ ವಿಚಾರದ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.