ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಜಾಮಿಯಾ ಮಸೀದಿ ಆವರಣದಲ್ಲಿ ‘ಗೂಂಡಾಗಿರಿ ಮತ್ತು ಭಯೋತ್ಪಾದನಾ ಪ್ರಚೋದನಕಾರಿ ಘೋಷಣೆ’ಗೆ ಸಂಬಂಧಿಸಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ನೌಹಟ್ಟಾ ಪೊಲೀಸ್ ಠಾಣೆಯಲ್ಲಿ ಘೋಷಣೆ ಕೂಗಿದವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಪೊಲೀಸರು ಪ್ರಮುಖ ಆರೋಪಿಗಳನ್ನು ಒಳಗೊಂಡಂತೆ ಹಲವರನ್ನು ಬಂಧಿಸಿದ್ದಾರೆ.
ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುವಾಗ ಅಡ್ಡಿಪಡಿಸಲು ಮತ್ತು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ ಕೆಲವರು ದೇಶದ್ರೋಹಿ ಘೋಷಣೆ ಕೂಗಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.
ಶ್ರೀನಗರದ ಜಾಮಿಯಾ ಮಸೀದಿ ಬಳಿ ಶುಕ್ರವಾರ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಝಾಕಿರ್ ಮೂಸಾನನ್ನು ಶ್ಲಾಘಿಸಿದ ಜನರ ಗುಂಪು ಭಯೋತ್ಪಾದಕ ಘೋಷಣೆಗಳನ್ನು ಕೂಗಿದ್ದಾರೆ. ಕೆಲವರು ಗುಂಪು ಹಿಂಸಾಚಾರ ಪ್ರಚೋದಿಸುವ ಆಜಾದಿ ಘೋಷಣೆಗಳು ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಮಸೀದಿಯ ಹೊರಗೆ ನಿಯೋಜಿಸಲಾಗಿದ್ದ ಜೆ & ಕೆ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯ ಮೇಲೂ ಕಲ್ಲು ತೂರಾಟ ನಡೆಸಲಾಯಿತು. ನಂತರ, ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು.