alex Certify BIG NEWS: ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ರಾಜ್ಯಾದ್ಯಂತ ತಡೆಹಿಡಿಯಲಾಗಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ರಾಜ್ಯಾದ್ಯಂತ ತಡೆಹಿಡಿಯಲಾಗಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು: ಮಂಜಾಗ್ರತೆ ಕ್ರಮವಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ತಡೆಹಿಡಿಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವುಗಳ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಐವಿ ದ್ರಾವಣದ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಬಳಕೆ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಿಂಗರ್ ಲ್ಯಾಕ್ಟೇಟ್ ಗ್ಲುಕೋಸ್ ಅನ್ನ ಈ ಹಿಂದಿನಿಂದಲು ಆಸ್ಪತ್ರೆಗಳಲ್ಲಿ ಬಳಕೆ ಮಾಡುತ್ತಾ ಬರಲಾಗುತ್ತಿದೆ. ಈ ಬಾರಿಯೂ ಔಷಧ ಸರಬರಾಜು ನಿಗಮಕ್ಕೆ 192 ಬ್ಯಾಚ್ ಗಳಲ್ಲಿ‌ ಐವಿ ದ್ರಾವಣ ಪೂರೈಕೆಯಾಗಿತ್ತು. ಇದರ ಬಳಕೆ ಸಂದರ್ಭದಲ್ಲಿ ಎರಡು ಬ್ಯಾಚ್ ಗಳ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾದಾಗ ಮುಂಜಾಗ್ರತೆ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲ 192 ಬ್ಯಾಚ್ ಗಳ ದ್ರಾವಣವನ್ನ ಆಸ್ಪತ್ರೆಗಳಲ್ಲಿ ಬಳಸದಂತೆ ತಡೆಹಿಡಿಯಲಾಗಿತ್ತು. ಆ ಬಳಿಕ ಕಂಪನಿಯವರು ಹೈ ಕೋರ್ಟ್ ನಿಂದ ಆದೇಶ ಪಡೆದ ಹಿನ್ನೆಲೆಯಲ್ಲಿ ಸೆಂಟ್ರಲ್ ಡ್ರಗ್ ಲ್ಯಾಬರೋಟರಿಯಲ್ಲಿ ಟೆಸ್ಟಿಂಗ್ ನಡೆದಾಗ ದ್ರಾವಣ ಬಳಸಬಹುದು ಎಂಬ ವರದಿ ಬಂತು. ಸಿ.ಡಿ.ಎಲ್ ನವರ ವರದಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಜ್ಞರ ತಾಂತ್ರಿಕ ಸಮಿತಿ ರಚಿಸಿ ಟೆಸ್ಟಿಂಗ್ ನಡೆಸಿ ಸ್ಟ್ಯಾಂಡರ್ಡ್ ಕ್ವಾಲಿಟಿಯ ಕೆಲವು ಬ್ಯಾಚ್ ಗಳ ದ್ರಾವಣವನ್ನ ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ದ್ರಾವಣದ ಬಳಕೆಯಾಗಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಅನುಮಾನಗಳು ವ್ಯಕ್ತವಾಗಿವೆ ಎಂದರು.

ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್ ಗಳನ್ನ ಅನರೋಬಿಕ್ ಟೆಸ್ಟ್ ಗೆ ಕಳಿಸಿದ್ದೇವೆ. ಬಾಣಂತಿಯರ ಸಾವಿಗೆ ಐವಿ ದ್ರಾವಣವೂ ಒಂದು ಕಾರಣವಾಗಿರಬಹುದಾ ಅಥವಾ ಇಲ್ಲಾವಾ ಎಂಬುದು ಅನರೋಬಿಕ್ ಟೆಸ್ಟ್ ನಲ್ಲಿ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.

‌ವಾರದಲ್ಲಿ ಈ ಟೆಸ್ಟಿಂಗ್ ವರದಿ ಬರಲಿದೆ. ಆ ಬಳಿಕ ಐವಿ ದ್ರಾವಣ ಬಳಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯ ವರೆಗೆ ಮುಂಜಾಗ್ರತೆ ಕ್ರಮವಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ರಾಜ್ಯಾದ್ಯಂತ ತಡೆಹಿಡಿಯಲಾಗಿದೆ. ನಮಗೆ ಪ್ರತಿಯೊಂದು ಜೀವವು ಮುಖ್ಯ. ಈ ರೀತಿಯ ಅನುಮಾನಗಳು ವ್ಯಕ್ತವಾದಾಗ ಮುನ್ನೆಚ್ಚೆರಿಕೆ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಸದಂತೆ ಎಲ್ಲ‌ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...