ಕೋಕ್ ಸ್ಟುಡಿಯೋ ಪಾಕಿಸ್ತಾನವು ‘ಪಸೂರಿ’ ಅನ್ನು ಬಿಡುಗಡೆ ಮಾಡಿದಾಗಿನಿಂದ, ಈ ಹಾಡು ಪ್ರಪಂಚದಾದ್ಯಂತದ ಭಾಷಾ ಅಡೆತಡೆಗಳು, ಭೌಗೋಳಿಕ ಗಡಿಗಳನ್ನು ಮೀರಿ ಪ್ರಸಿದ್ಧಿ ಪಡೆದಿದೆ. ವೈರಲ್ ಹಿಟ್ ಹಾಡು ಭಾರತದ ಸಂಗೀತ ಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ, ಕೇರಳದ ಮೂವರು ಒಡಹುಟ್ಟಿದವರು ಈ ಹಾಡನ್ನು ಮರುಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಗಾಯಕ ಮತ್ತು ಯೂಟ್ಯೂಬರ್ ಡಾನಾ ರಾಝಿಕ್ (19) ಅವರು ತಮ್ಮ ಸಹೋದರಿಯರಾದ ತೂಬಾ ರಝಿಕ್ (25) ಮತ್ತು ಮುಹಮ್ಮದ್ ದುರ್ರಾ ರಾಝಿಕ್ (17) ಅವರೊಂದಿಗೆ ಹಾಡಿದ್ದಾರೆ. ಪಾಕಿಸ್ತಾನಿ ಗಾಯಕರಾದ ಶೇ ಗಿಲ್ ಮತ್ತು ಅಲಿ ಸೇಥಿ ಅವರ ಹಿಟ್ ಯುಗಳ ಗೀತೆಯ ಆವೃತ್ತಿಯನ್ನು ಈ ಸಹೋದರ-ಸಹೋದರಿಯರು ಹಾಡಿದ್ದಾರೆ. ಈ ಹಾಡು ಹಾಡುವುದನ್ನು ವಿಡಿಯೋ ಮೂಲಕ ಈ ಒಡಹುಟ್ಟಿದವರು ಮರುಸೃಷ್ಟಿಸಿದ್ದಾರೆ.
ಮೂಲ ಹಾಡಿನಂತೆಯೇ ಹಾಡಿರುವ ಕೇರಳದ ಈ ಗಾಯಕರು ಪಾಪ್ ಬೀಟ್ ಗಳಿಗೆ ಜಾನಪದ ಟ್ಯೂನ್ ಗಳನ್ನು ಜೋಡಿಸಿದ್ದಾರೆ. ಇವರ ಸುಂದರವಾದ ಗಾಯನ, ಉತ್ತಮ ವಿಡಿಯೋ ದೇಶದಾದ್ಯಂತದ ಜನರ ಗಮನವನ್ನು ಸೆಳೆದಿದೆ. ದೇಶದಲ್ಲಿ ಈ ಯೂಟ್ಯೂಬ್ ವಿಡಿಯೋ ಟ್ರೆಂಡಿಂಗ್ ಆಗಿದೆ.
ಡಾನಾ ಅವರ ಈ ಹಿಂದಿನ ವಿಡಿಯೋಗಳು ಸಹ ಕೇರಳದಲ್ಲಿ ಅಲೆಗಳನ್ನು ಸೃಷ್ಟಿಸಿದ್ದರೂ, ಈ ಬಾರಿ ಮಾತ್ರ ಚಂಡಮಾರುತವನ್ನೇ ಸೃಷ್ಟಿಸಿದೆ. ಹಾಡುವುದರ ಜೊತೆಗೆ ವಿಡಿಯೋ ಕೂಡ ಬಹಳ ಅದ್ಭುತವಾಗಿ ಮೂಡಿಬಂದಿದೆ. ಪಸೂರಿ ಹಾಡನ್ನು ನೂರಾರು ಮಂದಿ ತಮ್ಮದೇ ಆವೃತ್ತಿಯಲ್ಲಿ ಹಾಡಿದ್ದರೂ ಕೂಡ ಸಹೋದರ-ಸೋದರಿಯರ ಈ ಹಾಡು ಎಲ್ಲರ ಗಮನಸೆಳೆದಿದೆ. ಮೂರು ದಿನಗಳ ಅವಧಿಯಲ್ಲಿ ಈ ವಿಡಿಯೋ ಈಗಾಗಲೇ 4.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಈ ಗಾಯಕರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.