ಆನ್‌ಲೈನ್ ಟ್ರಾವೆಲ್ ಕಂಪೆನಿಯಾದ EaseMyTrip ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದ್ರೆ ಇದರ ಸಹ ಸಂಸ್ಥಾಪಕರ ಜೀವನಗಾಥೆ ಹೆಚ್ಚಿನವರಿಗೆ ಗೊತ್ತಿಲ್ಲ. ಈ ಬಗ್ಗೆ ಇದರ ಸಹ ಸಂಸ್ಥಾಪಕರಾದ ರಿಕಾಂತ್ ಪಿಟ್ಟಿ ಅವರೇ ಲಿಂಕ್ಡ್ಇನ್ ನಲ್ಲಿ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಲಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ ಕಾರನ್ನು ಖರೀದಿಸುವ ಮೂಲಕ ತನ್ನ ಬಹುಕಾಲದ ಕನಸು ಈಡೇರಿದೆ ಎಂದು ಹೇಳಿದ್ದಾರೆ. ಇದರ ಜೊತೆ ಲಂಬೋರ್ಗಿನಿಯನ್ನು ಹೊಂದುವ ಅವರ ಕನಸು 19 ವರ್ಷಗಳಿಂದ ಹೇಗೆ ಮುಂದುವರೆಯಿತು ಎಂಬುದನ್ನು ಅವರು ತಿಳಿಸಿದ್ದಾರೆ. ಈ ಕನಸನ್ನು ಸಾಕಾರಗೊಳಿಸಲು ತೆಗೆದುಕೊಂಡ ದೃಢ ಸಂಕಲ್ಪ ಮತ್ತು ಶ್ರಮವನ್ನು ಸಹ ವಿವರಿಸಿದ್ದಾರೆ.
ತನ್ನ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಪಿಟ್ಟಿ ತನ್ನ ಉದ್ಯಮ ಪ್ರಯಾಣದ ಸಾಹಸಗಾಥೆಯನ್ನು ಬರೆದಿದ್ದಾರೆ. ರಿಕಾಂತ್ ಪಿಟ್ಟಿ ಮತ್ತು ಅವನ ಸಹೋದರರು 16 ನೇ ವಯಸ್ಸಿನಲ್ಲಿ ಈ ಟ್ರಾವೆಲ್ ವ್ಯವಹಾರವನ್ನು ಪ್ರಾರಂಭಿಸಿದರು. 50,000 ಬಂಡವಾಳದ ಮೂಲಕ EaseMyTrip.com ಅನ್ನು ಪ್ರಾರಂಭಿಸಿದ್ರು. ಆದ್ರೆ ಇದೀಗ ಈ ಕಂಪನಿಯು ಭಾರತದ ಎರಡನೇ ಅತಿದೊಡ್ಡ ಆನ್‌ಲೈನ್ ಟ್ರಾವೆಲ್ ಕಂಪನಿಯಾಗಿ ಬೆಳೆದಿದೆ.
ಪಿಟ್ಟಿ ಅವರ ಈ ಕಥೆ ಕೇವಲ ಲಂಬೋರ್ಗಿನಿ ಕಾರನ್ನು ಪಡೆದಿರುವುದರ ಬಗ್ಗೆ ಅಲ್ಲ. ಬದಲಾಗಿ ಕಠಿಣ ಪರಿಶ್ರಮದ ಬಗ್ಗೆ ಅವರು ಬರೆದಿದ್ದು “ನಿನ್ನೆಯಷ್ಟೇ, ನನಗೆ ನನ್ನ ಕನಸಿನ ಕಾರು ಲಂಬೋರ್ಗಿನಿ ಉರುಸ್ ಪರ್ಫಾರ್ಮಂಟೆ ಸಿಕ್ಕಿತು. ಇದು ಭಾರತದಲ್ಲಿ ಮೊದಲನೆಯದು ಮತ್ತು ವರ್ಡೆ ವೈಪರ್ ಎಂಬ ವಿಶೇಷ ಹಸಿರು ಬಣ್ಣದಲ್ಲಿ ಹೊಳೆಯುತ್ತಿದೆ. ಆದರೆ ಈ ಕಥೆಯು ಕೇವಲ ಕಾರಿನ ಬಗ್ಗೆ ಅಲ್ಲ. ಕಠಿಣ ಪರಿಶ್ರಮ ಹಾಕಿದ್ರೆ ಕನಸುಗಳು ನನಸಾಗುತ್ತವೆ ಮತ್ತು ಇದು ಕಠಿಣ ಪರಿಶ್ರಮದ ಶಕ್ತಿ” ಎಂದು ಅವರು ಕ್ಯಾಪ್ಶನ್‌ನಲ್ಲಿ ಬರೆದಿದ್ದಾರೆ.
ಈ ಪೋಸ್ಟ್ ತನ್ನ ಯಶಸ್ಸನ್ನು ತೋರ್ಪಡಿಸಲು ಅಲ್ಲ ಬದಲಾಗಿ ಇದು ಇತರರನ್ನು ಪ್ರೇರೇಪಿಸಲು ಎಂದು ಪಿಟ್ಟಿ ಒತ್ತಿ ಹೇಳಿದ್ದಾರೆ. ಎಂದಿಗೂ ಛಲವನ್ನು ಬಿಡದಿರುವುದು, ಸವಾಲುಗಳನ್ನು ನೇರವಾಗಿ ಎದುರಿಸುವುದು ಮತ್ತು ತನ್ನ ಗುರಿಗಳನ್ನು ಸಾಧಿಸಲು ಅವಿರತವಾಗಿ ಶ್ರಮಿಸುವ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ. ಈ ಪೋಸ್ಟ್‌ಗೆ 2 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವು ಪ್ರತಿಕ್ರಿಯೆಗಳು ಬಂದಿವೆ. ಪಿಟ್ಟಿ ಅವರ ಈ ಯಶಸ್ಸಿನ ಕಥೆಯಿಂದ ಜನ ಸಾಕಷ್ಟು ಪ್ರಭಾವಿತರಾಗಿದ್ದು ಪಿಟ್ಟಿ ಅವರನ್ನು ಅಭಿನಂದಿಸಿದ್ದಾರೆ.