ಜೂನ್ 1 ಅಂದ್ರೆ ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಕಂಡು ಬಂದಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.
ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಲಿದೆ. ಹೊಸ ನಿಯಮದ ಪ್ರಕಾರ, ಪಿಎಫ್ ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಬೇಕು. ಆಧಾರ್ನೊಂದಿಗೆ, ಪಿಎಫ್ ಖಾತೆ ಜೋಡಿಸುವಂತೆ ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು ಉದ್ಯೋಗದಾತರ ಜವಾಬ್ದಾರಿಯಾಗಿದೆ. ಈ ಹೊಸ ನಿಯಮ ಜೂನ್ 1 ರಿಂದ ಅನ್ವಯವಾಗಲಿದೆ.
ಬ್ಯಾಂಕ್ ಆಫ್ ಬರೋಡ ಚೆಕ್ ಪಾವತಿ ವಿಧಾನದಲ್ಲಿ ಬದಲಾವಣೆ ಮಾಡಿದೆ. ಇದಕ್ಕಾಗಿ ಬ್ಯಾಂಕ್ ಪಾಜಿಟಿವ್ ಪೇ ಕನ್ಫರ್ಮೇಷನ್ ನಿಯಮ ಜಾರಿಗೆ ತಂದಿದೆ. ಗ್ರಾಹಕರು 2 ಲಕ್ಷಕ್ಕಿಂತ ಹೆಚ್ಚಿನ ಪೇಮೆಂಟ್ ಚೆಕ್ ಮೂಲಕ ಮಾಡುವ ವೇಳೆ ಪಾಜಿಟಿವ್ ಪೇ ಕನ್ಫರ್ಮೇಷನ್ ಮೂಲಕ ಮಾಹಿತಿ ನೀಡಬೇಕಾಗುತ್ತದೆ.
ಇಂದಿನಿಂದ ದೇಶಿಯ ವಿಮಾನ ಪ್ರಯಾಣ ದುಬಾರಿಯಾಗಿದೆ. ಟಿಕೆಟ್ ದರ ಶೇಕಡಾ 13ರಿಂದ ಶೇಕಡಾ 16ರಷ್ಟು ಹೆಚ್ಚಾಗಿದೆ. 40 ನಿಮಿಷ ದೂರದ ವಿಮಾನದ ಟಿಕೆಟ್ ದರ 2300 ರೂಪಾಯಿಯಿಂದ 2600 ರೂಪಾಯಿಯಾಗಿದೆ. 60 ನಿಮಿಷ ಪ್ರಯಾಣದ ವಿಮಾನ ದರ 2900 ರೂಪಾಯಿಯಿಂದ 3300ಕ್ಕೆ ಏರಿಕೆಯಾಗಿದೆ.
ಎಲ್ಪಿಜಿ ಗ್ರಾಹಕರಿಗೆ ಜೂನ್ ಒಂದರಲ್ಲಿ ಖುಷಿ ಸುದ್ದಿ ಸಿಕ್ಕಿದೆ. ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಕಡಿತಗೊಳಿಸಿವೆ. ಐಒಸಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿದಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 122 ರೂಪಾಯಿ ಇಳಿಕೆ ಕಂಡು 1473.50 ರೂಪಾಯಿಯಾಗಿದೆ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಜೂನ್ 1ರಿಂದ ಗೂಗಲ್ ಫೋಟೋಗಳಲ್ಲಿ ಅನಿಯಮಿತ ಫೋಟೋಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಪ್ರತಿ ಜಿಮೇಲ್ ಬಳಕೆದಾರರಿಗೆ 15 ಜಿಬಿ ಜಾಗ ನೀಡಲಾಗುವುದು. ಹೆಚ್ಚುವರಿ ಫೋಟೋಗಳಿಗೆ ಹಣ ಪಾವತಿ ಮಾಡಬೇಕಾಗುತ್ತದೆ.
ಯುಟ್ಯೂಬ್ ನಿಂದ ಗಳಿಸುತ್ತಿರುವ ಜನರು ಜೂನ್ ಒಂದರಿಂದ ಯುಟ್ಯೂಬ್ ಗೆ ಪಾವತಿ ಮಾಡಬೇಕು. ಯುಟ್ಯೂಬ್ ನಲ್ಲಿ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಗಳಿಕೆಗೆ ಜನರು ತೆರಿಗೆ ಪಾವತಿ ಮಾಡಬೇಕು. ಅಮೆರಿಕನ್ ವೀಕ್ಷಕರಿಂದ ಪಡೆದ ವೀಕ್ಷಣೆಗೆ ಮಾತ್ರ ಹಣ ಪಾವತಿ ಮಾಡಬೇಕು.